ಚುನಾವಣಾ ಕಾರ್ಯಕ್ಕೆ ಖಾಸಗಿ ವಾಹನ ಬಳಕೆ: ಜಿಲ್ಲಾಧಿಕಾರಿ ಶಿಖಾ
ಮೈಸೂರು: ಲೋಕಸಭಾ ಚುನಾವಣಾ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳ ಅವಶ್ಯಕತೆ ಇರುವುದರಿಂದ ನಿಗದಿ ಪಡಿಸಿರುವ ಬಾಡಿಗೆ ಆಧಾರದ ಮೇಲೆ ವಾಣಿಜ್ಯ ಉದ್ದೇಶಕ್ಕಾಗಿ ಪರವಾನಗಿ ಪಡೆದಿರುವ ವಾಹನಗಳನ್ನು ಬಳಸಿಕೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಸಿ. ಶಿಖಾ ತಿಳಿಸಿದ್ದಾರೆ.
ಮೈಸೂರು ನಗರ ಮತ್ತು ತಾಲೂಕು ವ್ಯಾಪ್ತಿಯಲ್ಲಿ ವಾಣಿಜ್ಯ ಉದ್ದೇಶಕ್ಕೆ ಪರವಾನಗಿ ಪಡೆದಿರುವ ಎಲ್ಲಾ ಸರ್ಕಾರಿ ವಾಹನ ಮಾಲೀಕರು, ಟ್ರಾವೆಲ್ ಏಜೆನ್ಸಿಯವರು, ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಕಾರ್ಯದರ್ಶಿ, ಗೂಡ್ಸ್ ಟೆಂಪೋ ಮಾಲೀಕರು ಮತ್ತು ವಾಹನ ಚಾಲಕರ ಸಂಘದ ಅಧ್ಯಕ್ಷರು, ಮಿನಿ ಲಾರಿ ಸಂಘದ ಅಧ್ಯಕ್ಷರು ಸರ್ಕಾರ ನಿಗದಿ ಪಡಿಸಿರುವ ಬಾಡಿಗೆ ಆಧಾರದ ಮೇಲೆ ವಾಹನಗಳನ್ನು ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ಅಧೀಕ್ಷಕರು ಇವರಿಗೆ ಸ್ವಯಂ ಸ್ಫೂರ್ತಿಯಿಂದ ಮುಂದೆ ಬಂದು ವಾಹನಗಳನ್ನು ಬಾಡಿಗೆಗೆ ನೀಡಬಹುದಾಗಿದೆ. ಅಲ್ಲದೆ ಆಸಕ್ತ ವಾಹನ ಮಾಲೀಕರು ಸಹ ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ. ಖಾಸಗಿ ವಾಹನಗಳ ಮಾಲೀಕರು ಹಾಗೂ ಟ್ರಾವೆಲ್ ಏಜೆನ್ಸಿಯವರು ಪೊಲೀಸ್ ಇಲಾಖೆ ಹಾಗೂ ಸಹಾಯಕ ಚುನಾವಣಾಧಿಕಾರಿ ಕೋರುವ ವಾಹನಗಳನ್ನು ನೀಡದಿದ್ದ ಕಾಯ್ದೆ ಪ್ರಕಾರ ಪೊಲೀಸ್ ಹಾಗೂ ಆರ್ಟಿಒ ಮೂಲಕ ವಾಹನ ವಶಕ್ಕೆ ಪಡೆಯಲಾಗುವುದು ಎಂದರು.