ಜೆಡಿಎಸ್ ಮುಗಿಸಲು ಸಿಎಂ ತಂತ್ರ
ಕ.ಪ್ರ.ವಾರ್ತೆ ಮೈಸೂರು ಮಾ. 24
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ತಾಯಿ ಸಮಾನ. ಆದರೆ, ಜನ್ಮ ಕೊಟ್ಟ ಪಕ್ಷದ ಕತ್ತು ಹಿಸುಕಲು ಅವರು ಪ್ರಯತ್ನಿಸುತ್ತಿದ್ದಾರೆ. ಚುನಾವಣೆಯಾದ ಮೇಲೆ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಇಳಿಸಿದರೆ ಕಾಂಗ್ರೆಸ್ ಪಕ್ಷವನ್ನು ಮುಗಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನಗರದ ಸಾ.ರಾ. ಭವನದಲ್ಲಿ ಸೋಮವಾರ ಸಂಜೆ ನಡೆದ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈಗ ದೇವೇಗೌಡರನ್ನು ಸೋಲಿಸಬೇಕು ಎಂದು ಸಿದ್ದರಾಮಯ್ಯ ಹೊರಟಿದ್ದಾರೆ. ಆದರೆ, ಜೆಡಿಎಸ್ ಬೆಳೆಸಿದ್ದರಿಂದಲೇ ಅವರನ್ನು ಕಾಂಗ್ರೆಸ್ ಗುರುತಿಸಿದೆ ಎಂಬುದನ್ನು ಮರೆಯಬಾರದು ಎಂದರು.
ಎಚ್.ಡಿ. ಕೋಟೆ ತಾಲೂಕನ್ನು ದತ್ತು ತೆಗೆದುಕೊಳ್ಳುವುದಾಗಿ, ಬೇರೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದ್ದರಿಂದ ಇಷ್ಟು ದಿನ ಕ್ಷೇತ್ರಕ್ಕೆ ಬಂದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾದರೇ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಿಗೆ ಮಾತ್ರ ಮುಖ್ಯಮಂತ್ರಿಯೇ ಎಂದು ಪ್ರಶ್ನಿಸಿದ ಅವರು, ಇಂತಹ ಸಂಕುಚಿತ ಮನೋಭಾವ ಇರುವ ವ್ಯಕ್ತಿಯನ್ನು ಬೆಳೆಸಬಾರದು ಎಂದು ಕೋರಿದರು.
ದೇವೇಗೌಡರು ಮಗನನ್ನು ಮುಖ್ಯಮಂತ್ರಿ ಮಾಡಲು ಸಿದ್ದರಾಮಯ್ಯ ಅವರನ್ನು ಪಕ್ಷದಿಂದ ಹೊರ ಹಾಕಿಲ್ಲ. ಹಾವನೂರು ವರದಿಯನ್ನು ದೇವೇಗೌಡರು ವಿರೋಧಿಸುವಾಗ ಜೊತೆಗಿದ್ದು, ಈಗ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಅಳುವ ಗಂಡಸು, ನಗುವ ಹೆಂಗಸನ್ನು ನಂಬಬಾರದು ಎಂದಿರುವ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಅತ್ತಿದ್ದು ಏಕೆ ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಅವರ ಪ್ರಕಾರ ಮಹಿಳೆಯರು ನಗಬಾರದು, ಜೀವನ ಪೂರ್ತಿ ಕಣ್ಣೀರು ಹಾಕಬೇಕೆ ಎಂದು ಕಿಡಿಕಾರಿದರು.
ನನ್ನನ್ನು ದೇವೇಗೌಡರು ಮುಖ್ಯಮಂತ್ರಿ ಮಾಡಿಲ್ಲ. ಬಿಜೆಪಿಯವರು, ನಮ್ಮ ಪಕ್ಷದ ಶಾಸಕರು ಒತ್ತಡ ಹಾಕಿದ್ದರಿಂದ ನಾನು ಮುಖ್ಯಮಂತ್ರಿಯಾದೆ. ಆ ಸಂದರ್ಭದಲ್ಲಿ 14 ದಿನ ಕಣ್ಣೀರು ಹಾಕಿದ್ದೇನೆ. ಇದನ್ನು ಚಾಮುಂಡೇಶ್ವರಿ ದೇವಿ ಮುಂದೆ ಹೇಳಲು ನಾನು ಸಿದ್ಧ. ಸಿದ್ದರಾಮಯ್ಯ ಬಯಸಿದಂತೆ ಮುಖ್ಯಮಂತ್ರಿಯಾದ ಮೇಲೆ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಬಿಜೆಪಿ ಜೊತೆ ಕೈ ಜೋಡಿಸಿದ್ದರಿಂದ ನನ್ನ ತಂದೆ ಶಾಪ ನೀಡಿದ್ದಾರೆ. ಮತ್ತೊಂದೆಡೆ ಪಕ್ಷವನ್ನು ಕಟ್ಟುವ ಜವಾಬ್ದಾರಿ ನನ್ನ ಮೇಲಿದೆ ಎಂದು ಅವರು ಹೇಳಿದರು.
ಸ್ವಾಭಿಮಾನ ರಾಜಕೀಯ ಮಾಡುವುದಾಗಿ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ರಾಹುಲ್ ಗಾಂಧಿ ಮುಂದೆ ಹೋಗಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಕೈಕಟ್ಟಿ ನಿಲ್ಲುತ್ತಿದ್ದಾರೆ. ಸಿದ್ದರಾಮಯ್ಯ ಅವರ ಒಂದೊಂದು ಹೇಳಿಕೆ ಕೇಳಿದರೂ ನನಗೆ ರಕ್ತ ಕುದಿಯುತ್ತಿದೆ. ನರೇಂದ್ರ ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರು, ವೀರಪ್ಪ ಮೊಯ್ಲಿ, ಕೃಷ್ಣಯ್ಯ ಶೆಟ್ಟಿ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ನರೇಂದ್ರ ಮೋದಿ ಅಲೆ ಇದೆ ಎಂಬುದು ಕೃತಕ ಗಾಳಿ. ಫ್ಯಾಂಟಸಿ ಪಾರ್ಕ್‌ನಲ್ಲಿ ನಿರ್ಮಿಸಲಾಗಿರುವ ಕೃತಕ ಅಲೆ ಇದ್ದಂತೆ. ಯಾವುದೇ ಕಾರಣಕ್ಕೂ ನರೇಂದ್ರ ಮೋದಿ ಗೆಲ್ಲುವುದಿಲ್ಲ. ದೇಶದ ಪ್ರಧಾನಮಂತ್ರಿ ಆಗುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬಾರದಂತೆ ಎಲ್ಲರೂ ಒಗ್ಗಟ್ಟಾಗಿದ್ದಾರೆ. ಮತ್ತೆ ಕನ್ನಡಿಗರೊಬ್ಬರು (ದೇವೇಗೌಡ) ಈ ದೇಶದ ಪ್ರಧಾನಿಯಾಗುವ ಅವಕಾಶ ಬಂದಿದೆ. ಜನ ಜೆಡಿಎಸ್‌ಗೆ ಮತ ನೀಡಿ, ಕನ್ನಡಿಗನನ್ನು ದೇಶದ ಪ್ರಧಾನಿ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಶಾಸಕ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್, ಎಸ್. ಚಿಕ್ಕಮಾದು, ಸಂದೇಶ್ ನಾಗರಾಜ್, ಮೇಯರ್ ಎನ್.ಎಂ. ರಾಜೇಶ್ವರಿ, ಉಪ ಮೇಯರ್ ವಿ. ಶೈಲೇಂದ್ರ, ಮಾಜಿ ಮೇಯರ್ ಸಂದೇಶ್ ನಾಗರಾಜ್, ಮೈಸೂರು ನಗರಾಧ್ಯಕ್ಷ ರಾಜಣ್ಣ, ಪಿ. ಶಾರದಮ್ಮ, ಸಿ.ಜೆ. ದ್ವಾರಕೀಶ್, ಸಂತೋಷ್ ಮೊದಲಾದವರು ಇದ್ದರು.
ಜಿಟಿಡಿ ಅಥವಾ ಸಾರಾ ಮಹೇಶ್ ಅಭ್ಯರ್ಥಿ
ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಹಿರಿಯ ಮುಖಂಡ ಜಾಫರ್ ಷರೀಫ್ ಅವರು ಒಪ್ಪಿಕೊಂಡು ಬಿ ಫಾರಂನ್ನು ಮೆಕ್ಕಾಗೆ ತೆಗೆದುಕೊಂಡು ಹೋದರು. ಆದರೆ, ಅವರು ದೇವರ ಪ್ರೇರಣೆ ಆಗಿಲ್ಲ ಎಂದು ಟಿಕೆಟ್ ನಿರಾಕರಿಸಿದ್ದಾರೆ. ಹೀಗಾಗಿ ಶಾಸಕ ಜಿ.ಟಿ. ದೇವೇಗೌಡ ಅಥವಾ ಸಾ.ರಾ. ಮಹೇಶ್ ಅವರನ್ನು ಕಣಕ್ಕೆ ಇಳಿಸಲು ನಿರ್ಧ ರಿಸಲಾಗಿದ್ದು, ರಾತ್ರಿ ವೇಳೆಗೆ ಅಂತಿಮಗೊಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ನಿಂತುಕೊಳ್ಳಲು ಜನ ಒತ್ತಡ ಹಾಕುತ್ತಿದ್ದಾರೆ. ಇಲ್ಲದಿದ್ದರೇ ನಾನೇ ಮೈಸೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೆ. ಯಾರೇ ಅಭ್ಯರ್ಥಿಯಾದರೂ ದೇವೇಗೌಡರು, ಕುಮಾರಸ್ವಾಮಿ ಅಭ್ಯರ್ಥಿ ಎಂದು ತಿಳಿದು ಜನ ಮತ ಚಲಾಯಿಸಬೇಕು ಎಂದು ಅವರು ಕೋರಿದರು.