ಮೋದಿ ಪ್ರಧಾನಮಂತ್ರಿ ಮಾಡೋದೆ ಬಿಜೆಪಿ ಉದ್ದೇಶ: ಸುಜಾ ಕುಶಾಲಪ್ಪ
ಮೈಸೂರು: ಮೋದಿ ಪ್ರಧಾನಿ ಮಾಡಿ, ದೇಶಕ್ಕೆ ಸುಭದ್ರ ಆಡಳಿತ ನೀಡುವುದು ಬಿಜೆಪಿ ಉದ್ದೇಶ ಎಂದು ಕೊಡಗು ಬಿಜೆಪಿ ಜಿಲ್ಲಾಧ್ಯಕ್ಷೆ ಸುಜಾ ಕುಶಾಲಪ್ಪ ಹೇಳಿದರು. ಗೋವಿಂದರಾವ್ ಸ್ಮಾರಕ ಸಭಾಂಗಣದಲ್ಲಿ ಲೋಕಸಭೆ ಚುನಾವಣೆ ಸಂಬಂಧ ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಸೋಮವಾರ ಏರ್ಪಡಿಸಿದ್ದ ಚುನಾವಣಾ ನಿರ್ವಹಣ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಮೋದಿ ಅವರನ್ನು ಪ್ರಧಾನಿ ಮಾಡಿ ದೇಶಕ್ಕೆ ಸುಭದ್ರ ಆಡಳಿತ ನೀಡುವುದು ನಮ್ಮ ಉದ್ದೇಶ. ಇಂದು ಮೋದಿ ಅಲೆ ಕೊಡಗು ಮತ್ತು ಮೈಸೂರಿನ ಮನೆ ಮನೆಯನ್ನು ತಲುಪಿದೆ. ಮೋದಿ ಆಡಳಿತದಲ್ಲಿ ಗುಜರಾತ್ ಅಭಿವೃದ್ಧಿ ಹೊಂದಿದಂತೆ ಇಡಿ ದೇಶ ಅಭಿವೃದ್ಧಿ ಹೊಂದಬೇಕು ಎಂಬುದು ಬಿಜೆಪಿ ಆಶಯ. ಮೋದಿ ಅಧಿಕಾರಕ್ಕೆ ಬಂದರೆ ಭಾರತ ಆದರ್ಶ, ಸುಭದ್ರ ಮತ್ತು ಸಂಪನ್ಮೂಲ ಭರಿತ ರಾಷ್ಟ್ರವಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಸದಸ್ಯ ಸಿದ್ದರಾಜು ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರವು ಬಿಜೆಪಿ ಸರ್ಕಾರ ಮೀಸಲಿಟ್ಟ ಹಣವನ್ನು ಕೇವಲ ಗುದ್ದಲಿಪೂಜೆಗೆ ವ್ಯಯಿಸುತ್ತಿದೆ. ಸಾಲ ಮನ್ನಾ ಬಿಟ್ಟರೆ ಯಾವುದೆ ಅಭಿವೃದ್ಧಿ ಯೋಜನೆಯನ್ನೂ ಕಾಂಗ್ರೆಸ್ ಸರ್ಕಾರ ಕೈಗೊಂಡಿಲ್ಲ. ನರಹಂತರಿಗೆ ಯಾರು ಮತ ನೀಡುತ್ತಾರೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಏ.17 ರಂದು ನಡೆಯಲಿರುವ ಚುನಾವಣೆ ತಕ್ಕ ಉತ್ತರ ನೀಡಲಿದೆ ಎಂದರು.