ಜಾರಕಿಹೊಳಿ ವಿರುದ್ಧದ ಹೇಳಿಕೆಗೆ ಖಂಡನೆ
ಮೈಸೂರು: ಸಂಪುಟ ದರ್ಜೆ ಸಚಿವರಾದ ಸತೀಶ್ ಜಾರಕಿಹೊಳಿ ಅವರು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಕಾಂಗ್ರೆಸ್ ಪರ ಮತಯಾಚಿಸುವುದನ್ನು ಯಾವುದೇ ಸಂಘಟನೆ ಅಥವಾ ವ್ಯಕ್ತಿ ಪ್ರಶ್ನಿಸುವಂತಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ.ಪಂಗಡ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎನ್. ಅನಿಲ್ಕುಮಾರ್ ತಿಳಿಸಿದರು. ಜಾರಕಿಹೊಳಿ ನಾಯಕ ಜನಾಂಗದ ಪ್ರಮುಖರಾಗಿದ್ದು, ಎರಡು ದಶಕಗಳಿಂದ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ನಾಯಕ ಜನಾಂಗದವರಲ್ಲದೆ ಇತರೆ ಹಿಂದುಳಿದ ಹಾಗೂ ಮೇಲ್ವರ್ಗದ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಮೈಸೂರು ಭಾಗದಲ್ಲಿ ಪ್ರಚಾರ ಕೈಗೊಂಡು ನಾಯಕ ಜನಾಂಗದ ಮತಗಳ ದಿಕ್ಕು ತಪ್ಪಿಸುತ್ತಾರೆ ಎಂಬ ಜಿಲ್ಲಾ ನಾಯಕರ ಯುವ ವೇದಿಕೆ ಹೇಳಿಕೆಯ ಹಿಂದೆ ರಾಜಕೀಯ ಪಕ್ಷಗಳ ಕೈವಾಡ ಇದೆ ಎಂದು ಆರೋಪಿಸಿದರು.
ಅಲ್ಲದೆ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಪರಿವಾರ ಮತ್ತು ತಳವಾರ ಪದಗಳನ್ನು ಪ.ಪಂಗಡಕ್ಕೆ ಸೇರಿಸಿದೆ. ಆದರೂ ಜಾರಕಿಹೊಳಿ ಅವರ ವಿರುದ್ಧ ಇಂಥ ಹೇಳಿಕೆ ನೀಡಬಾರದು ಎಂದರು.