ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ತಾಯಿಯಾದ ಬಾಲಕಿ: ಆರೋಪಿ ಸೆರೆ

Mainashree
Updated On : 25 Mar 2014, 11:13 am

ಮೈಸೂರು: ತಾಯಿಯೊಡನೆ ಸಲುಗೆಯಿಂದಿದ್ದ ವ್ಯಕ್ತಿಯೊಬ್ಬ ಆಕೆಯ ಮಗಳ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದು, ಆ ಬಾಲಕಿ ಮಗುವೊಂದಕ್ಕೆ ಜನ್ಮ ನೀಡಿರುವ ಘಟನೆ ನಗರದಲ್ಲಿ ನಡೆದಿದೆ. ವಿದ್ಯಾರಣ್ಯಪುರಂ ವ್ಯಾಪ್ತಿಯಲ್ಲಿರುವ ಮಂಗಳಾದೇವಿ (ಹೆಸರು ಬದಲಾಯಿಸಲಾಗಿದೆ) ಮೂವರು ಮಕ್ಕಳ ತಾಯಿ. ಇವರ ಪತಿ ನಿಧನರಾದ ನಂತರದಲ್ಲಿ ಕೆಲವು ಆಸ್ತಿ, ವಹಿವಾಟು ವಿಚಾರಗಳಲ್ಲಿ ಕನಕಗಿರಿಯ ಮಹೇಶ್ಗೌಡ ಎಂಬವರ ಸಹಾಯ ಪಡೆದಿದ್ದು, ಇದು ವೈಯಕ್ತಿಕ ಸಲುಗೆಗೆ ತಿರುಗಿದೆ.
ಐದಾರು ವರ್ಷಗಳಿಂದ ಪರಿಚಯಸ್ಥನಾಗಿದ್ದ ಮಹೇಶ್ಗೌಡ 8ನೇ ತರಗತಿ ಓದುತ್ತಿದ್ದ ಮಂಗಳಾದೇವಿಯ ಮಗಳ ಮೇಲೆ ಅತ್ಯಾಚಾರ ಎಸಗಿದ್ದ. ಇದರಿಂದ ಗರ್ಭವತಿಯಾದ ಬಾಲಕಿಯೂ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ತನ್ನ ಮಗಳಿಗೆ ಹೆರಿಗೆಯಾಗುವ ಮೂರು ದಿನದ ಹಿಂದೆಯಷ್ಟೇ ಈ ವಿಚಾರ ತನಗೆ ತಿಳಿಯಿತು ಎಂದು ಮಂಗಳಾದೇವಿ ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಯವರು ಈ ವಿಚಾರವನ್ನು ಮಕ್ಕಳ ಕಲ್ಯಾಣ ಸಮಿತಿ ಹಾಗೂ ಮಹಿಳಾ ಸಹಾಯವಾಣಿಯ ಗಮನಕ್ಕೆ ತಂದಿದೆ. ತಕ್ಷಣ ಕಾರ್ಯ ಪ್ರವೃತ್ತರಾದ ಮಕ್ಕಳ ಕಲ್ಯಾಣ ಸಮಿತಿ, ಒಡನಾಡಿ ಸೇವಾಸಂಸ್ಥೆ, ಮಹಿಳಾ ಸಹಾಯವಾಣಿ ಯೋಜನೆಯ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ, ಬಾಲಕಿ ಹಾಗೂ ಮಂಗಳಾದೇವಿ ಅವರಿಂದ ಮಾಹಿತಿ ಸಂಗ್ರಹಿಸಿತು.
ಬಾಲಕಿ ಮತ್ತು ಮಗುವನ್ನು ಬಾಪೂಜಿ ಚಿಲ್ಡ್ರನ್ಸ್ ಹೋಂಗೆ ಪುನರ್ವಸತಿಗಾಗಿ ಸೇರಿಸಲಾಗಿದೆ. ಬಾಲಕಿಯ ತಾಯಿಯ ಮೇಲೆ ಒತ್ತಡ ಹೆಚ್ಚಾಗುವ ಲಕ್ಷಣಗಳಿದ್ದು, ಅವರಿಗೆ ಸೂಕ್ತ ರಕ್ಷಣೆ ನೀಡಿ, ಪ್ರಕರಣವನ್ನು ಸಮರ್ಪಕವಾಗಿ ನಿರ್ವಹಿಸಲು ಒಡನಾಡಿ ಸಂಸ್ಥೆಯ ಪರಶುರಾಮ್, ಸ್ಟ್ಯಾನ್ಲಿ ಆಗ್ರಹಿಸಿದ್ದಾರೆ. ಈ ಸಂಬಂಧ ವಿದ್ಯಾರಣ್ಯಪುರಂ ಠಾಣೆಯ ಇನ್ಸ್ಪೆಕ್ಟರ್ ಕೆ.ಸಿ. ಪ್ರಕಾಶ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೂಂಡು, ಆರೋಪಿ ಮಹೇಶ್ಗೌಡನನ್ನು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement