ವಿದೇಶಿಯರ ಆಕರ್ಷಿಸಿದ ಗ್ರಾಮಾಭಿವೃದ್ಧಿ ಯೋಜನೆ
ಮೈಸೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವಿದೇಶಿಯರನ್ನು ಆಕರ್ಷಿಸಿದೆ ಎಂದು ಮಂಜುನಾಥ ಕ್ಲಿನಿಕ್ನ ಡಾ.ಬೆಳ್ಳಿಪಾಡಿ ಸತೀಶ್ ರೈ ಹೇಳಿದರು.
ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕುವೆಂಪುನಗರ ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಈ ಯೋಜನೆ ಯಶಸ್ಸು ಇತರೆ ರಾಜ್ಯಗಳನ್ನಷ್ಟೇ ಅಲ್ಲ, ವಿದೇಶಿಯರನ್ನು ಆಕರ್ಷಿಸಿದೆ. ಈ ಯೋಜನೆಯನ್ನು ತಮ್ಮ ನಾಡಿನಲ್ಲಿ ಜಾರಿಗೊಳಿಸಲು ಬೇಕಾದ ಮಾಹಿತಿ, ತರಬೇತಿ ಪಡೆದಿದ್ದಾರೆ. ಇದರ ರೂವಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಲಭಿಸಿದ ಪ್ರಶಸ್ತಿಗಳು ಲೆಕ್ಕವಿಲ್ಲ ಎಂದರು.
ಯೋಜನೆಯಡಿಯಲ್ಲಿ 2.25 ಲಕ್ಷ ಸ್ವಸಹಾಯ ಸಂಘಗಳು, 23 ಲಕ್ಷ ಕುಟುಂಬಗಳು ಕಾರ್ಯನಿರ್ವಹಿಸುತ್ತಿವೆ. 2012-13ರಲ್ಲಿ ಈ ಯೋಜನೆಯ ವೆಚ್ಚದ ಗಾತ್ರವು 2500 ಕೋಟಿ ಮೀರಿದೆ. ನಮ್ಮವರಿಂದ ನಮ್ಮವರಿಗಾಗಿ ಸಿದ್ಧವಾದ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆರ್ಥಿಕವಾಗಿ ಸದೃಢರಾಗಿ: 11 ಸ್ವಸಹಾಯ ಸಂಘಗಳಿಗೆ ದಾಖಲಾತಿ ಪತ್ರಗಳನ್ನು ಹಸ್ತಾಂತರಿಸಿದ ಕೆ.ಆರ್. ಉಪ ವಿಭಾಗದ ಎಸಿಪಿ ಬಿ.ಟಿ.ಕವಿತಾ ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಮುಂದುವರಿದು ಸ್ವಾಭಿಮಾನಿ ಆಗಿರುವುದು ಸತ್ಯ ಸಂಗತಿ. ಮಹಿಳೆಯರು ಮುಂದುವರಿಯಲು ಸಂಘಟನೆಗಳ ಸಹಕಾರ ಅಗತ್ಯ. ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು. ಇದರಿಂದ ಕುಟುಂಬ ವ್ಯವಸ್ಥೆಯು ಗುಣಮಟ್ಟದಿಂದ ಕೂಡಿರುತ್ತದೆ ಎಂದು ಹೇಳಿದರು.
ಮಹಿಳೆಯರು ಕುಟುಂಬದ ಜೊತೆಗೆ ದೇಶದ ಅಭಿವೃದ್ಧಿ ಮಾಡಬೇಕು. ಮಹಿಳೆಯರಿಗೆ ಸಾಕಷ್ಟು ಸಮಸ್ಯೆಗಳಿವೆ, ಅವುಗಳನ್ನು ಮೀರಿ ಸಿಗುವ ಅವಕಾಶವನ್ನು ಬಳಸಿಕೊಳ್ಳಬೇಕು. ಮಹಿಳೆಯರು ಒಗ್ಗೂಡಿದರೆ ಶಕ್ತಿ ಹೆಚ್ಚಾಗುತ್ತದೆ. ಮಹಿಳೆಯರಲ್ಲಿ ಸಾಮರ್ಥ್ಯವಿದೆ. ಅದನ್ನು ಹೊರತರುವ ಅವಕಾಶ ಸಿಗಬೇಕಿದೆ ಎಂದು ತಿಳಿಸಿದರು.
ಸಿವಿಲ್ ಎಂಜಿನಿಯರ್ ಅರುಣ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಕೀಲ ಎಂ.ವೈ. ಕುಮಾರ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ಎಂ. ಚೇತನಾ, ಗಂಗಾಧರ ಇದ್ದರು.