ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅರ್ಹರಿಗೆ ಸಿಗದ ಗೌರವ ಡಾಕ್ಟರೇಟ್

Rashmi Kasaragodu
Updated On : 27 Mar 2014, 12:20 pm

ಮೈಸೂರು: ಬಹಳಷ್ಟು ವಿಶ್ವವಿದ್ಯಾಲಯಗಳು ಅರ್ಹರಿಗೆ ಗೌರವ ಡಾಕ್ಟರೇಟ್ ನೀಡುತ್ತಿಲ್ಲ ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್. ಹೆಗ್ಡೆ ಅಭಿಪ್ರಾಯಪಟ್ಟರು.
ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಡಾ.ಬಾಬೂ ಜಗಜೀವನರಾಮ್ ಅಧ್ಯಯನ, ಸಂಶೋಧನ ಮತ್ತು ವಿಸ್ತರಣ ಕೇಂದ್ರದ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಡಾ.ಬಾಬೂ ಜಗಜೀವನರಾಮ್ ಚಿಂತನೆಗಳ ಪ್ರಸ್ತುತತೆ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ನಿನ್ನೆ ಮೊನ್ನೆ ಸ್ಥಾಪನೆಯಾದ ವಿಶ್ವವಿದ್ಯಾಲಯಗಳು ಇಂದು ಐದಾರು ಮಂದಿಗೆ ಗೌರವ ಡಾಕ್ಟರೇಟ್ ನೀಡುವ ಮಟ್ಟಕ್ಕೆ ಬೆಳೆದಿವೆ. ಆದರೆ ಗೌರವ ಡಾಕ್ಟರೇಟ್‌ಗೆ ತನ್ನದೆ ಆದ ಮಹತ್ವ ಇದೆ. ಈ ಗೌರವವನ್ನು ಸ್ವೀಕರಿಸುವವರು ಮೇರು ವ್ಯಕ್ತಿ ಆಗಿಬೇಕು. ಆದರೆ ಅಂತಹ ಮೇರು ವ್ಯಕ್ತಿಯನ್ನು ಆಯ್ಕೆ ಮಾಡುತ್ತಿಲ್ಲ ಎಂದು ವಿಷಾದಿಸಿದರು.
ಏಕರೂಪದ ಶಿಕ್ಷಣ ಬೇಕು: ದೇಶದಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದವರು ನಮ್ಮಲ್ಲಿ ಹೆಚ್ಚಿದ್ದಾರೆ. ಬಡವರು ಮತ್ತು ಶ್ರೀಮಂತರ ನಡುವೆ ಅಂತರ ಹೆಚ್ಚಿದೆ. ಸಮಾಜ ಸರ್ವಾಂಗೀಣ ಅಭಿವೃದ್ಧಿಗೆ ಜ್ಞಾನ ಅಗತ್ಯ. ಆದರೆ ಉಳ್ಳವರಿಗೆ ಮತ್ತು ಬಡವರಿಗೆ ದೊರಕುತ್ತಿರುವ ಭಿನ್ನ ಶಿಕ್ಷಣ ಪದ್ಧತಿ ದೂರವಾಗಿ ಏಕ ರೂಪದ ಶಿಕ್ಷಣ ಪದ್ಧತಿ ಜಾರಿ ಆಗಬೇಕು. ಪ್ರಸ್ತುತ ಸಂದರ್ಭದಲ್ಲಿ ಜ್ಞಾನ ಸಂಪಾದನೆ ನಾಲ್ಕು ಗೋಡೆಗೆ ಸೀಮಿತವಾಗಿಲ್ಲ. ಕೇವಲ ಪದವಿ, ಡಿಪ್ಲೊಮಾ ಪಡೆಯುವುದರಿಂದ ಸಂಸ್ಕೃತಿ, ಸಂಸ್ಕಾರ ಬರುವುದಿಲ್ಲ. ಡಾ.ಬಿ.ಆರ್. ಅಂಬೇಡ್ಕರ್, ಬಾಬೂ ಜಗಜೀವನರಾಮ್ ಅವರಂಥ ಮಹನೀಯ ವ್ಯಕ್ತಿತ್ವ, ಆದರ್ಶಗಳನ್ನು ಅರಿಯಬೇಕು ಎಂದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪನೆಯಾದ ವಿವಿಧ ಪೀಠಗಳಿಗೆ ಸೂಕ್ತ ವ್ಯಕ್ತಿ ಹುಡುಕುವುದು ಕಷ್ಟದ ಕೆಲಸವಾಗಿದೆ. ಅಧ್ಯಯನ ಪೀಠಗಳು ಮಾಡುವ ಕೆಲಸದಲ್ಲಿ ವಿಶೇಷತೆ ಹೆಚ್ಚು ಕಾಣುತ್ತಿಲ್ಲ. ಕೇವಲ ಪೀಠಕ್ಕೆ ಅಂಟಿಕೊಳ್ಳದೆ, ಹಳ್ಳಿಗಾಡಿನಲ್ಲಿ ಜನರನ್ನು ಹುರಿದುಂಬಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಕರ್ನಾಟಕ ವಿವಿ ಕನ್ನಡ ಪ್ರಾಧ್ಯಾಪಕ ಪ್ರೊ.ಕೆ.ಆರ್. ದುರ್ಗಾದಾಸ್, ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಮೈಲಹಳ್ಳಿ ರೇವಣ್ಣ, ಸಂದರ್ಶಕ ಪ್ರಾಧ್ಯಾಪಕ ಡಾ. ತಿಪ್ಪೇಸ್ವಾಮಿ, ಪ್ರಾದೇಶಿಕ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ.ಸಿ.ಕೆ. ಮಹೇಶ್ವರಪ್ಪ, ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್. ಉದಯ್‌ಶಂಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement