ಕ್ಯಾಲಿಫೋರ್ನಿಯಾದಲ್ಲಿ ಅಕ್ಕ ವಿಶ್ವ ಕನ್ನಡ ಸಮ್ಮೇಳನ
ಮೈಸೂರು: ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಆಶ್ರಯದಲ್ಲಿ 8ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನವು ಆ.29 ರಿಂದ 31 ರವರೆಗೆ ಕ್ಯಾಲಿಫೋರ್ನಿಯಾದಲ್ಲಿ ಆಯೋಜಿಸಲಾಗಿದೆ.
ಸ್ಯಾನ್ ಜೋಸೆನಲ್ಲಿ ಸಮ್ಮೇಳನಕ್ಕಾಗಿ ಮೂರು ದೊಡ್ಡ ಸಭಾಂಗಣಗಳನ್ನು ಪಡೆದಿದ್ದು, ವಿಶ್ವದೆಲ್ಲೆಡೆಯಿಂದ ಸಾವಿರ ಮಂದಿ ಕನ್ನಡಿಗರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅಮೆರಿಕ ಕನ್ನಡ ಕೂಟಗಳ ಆಗರದ (ಅಕ್ಕ) ಅಧ್ಯಕ್ಷ ಡಾ. ಹಳೇಕೋಟೆ ವಿಶ್ವಾಮಿತ್ರ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಹ್ವಾನಿತ ಕಲಾವಿದರು, ವಿವಿಧ ಕ್ಷೇತ್ರ ಗಣ್ಯರು ಸಮ್ಮೇಳನದಲ್ಲಿ ಭಾಗವಹಿಸುವರು. ಈ ಸಮ್ಮೇಳನವು ಕನ್ನಡ ಸಾಂಸ್ಕೃತಿಕ ಸಂತೆ, ಕನ್ನಡಿಗರ ಹಬ್ಬ ಆಗಿದೆ. ಕನ್ನಡಿಗರ ಸಾಧನೆ, ಸಂಭ್ರಮ, ಸಂಕಲ್ಪ ಎಂಬ ಶೀರ್ಷಿಕೆಯನ್ನು 8ನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ನೀಡಲಾಗಿದೆ. ಅಮೆರಿಕದಲ್ಲಿ ವಲಸಿಗರನ್ನು ಎರಡನೇ ದರ್ಜೆ ಪ್ರಜೆಗಳಂತೆ ಕಾಣುವುದಿಲ್ಲ, ಬದಲಿಗೆ ಗೌರವವಿದೆ. ಕನ್ನಡಿಗರಿಗೆ ಮಾನ್ಯತೆ ಇದೆ. ಅಮೆರಿಕ ಅಭಿವೃದ್ಧಿಗೆ ಅಲ್ಲಿ ನೆಲೆಸಿರುವ ಕನ್ನಡಿಗರು ಅಪಾರ ಕೊಡುಗೆ ನೀಡುತ್ತಿದ್ದಾರೆ. ಯಾವುದೇ ದೊಡ್ಡ ಕಂಪನಿಗಳಿಗೆ ಹೋದರೂ ಕನ್ನಡಿಗರನ್ನು ಕಾಣಬಹುದಾಗಿದೆ. ಅಲ್ಲದೆ, ಕನ್ನಡಿಗ ಉದ್ಯಮಿಗಳೂ ಇದ್ದಾರೆ ಎಂದು ಅವರು ತಿಳಿಸಿದರು.
ಅಕ್ಕ ಉಪಾಧ್ಯಕ್ಷ ರಾಜ್ ಪಾಟೀಲ್, ಜಂಟಿ ಕಾರ್ಯದರ್ಶಿ ರವಿ ಬೋರೇಗೌಡ, ಜಂಟಿ ಖಜಾಂಚಿ ಡಾ. ನವೀನ್ ಕೃಷ್ಣ, ಮಾಜಿ ಅಧ್ಯಕ್ಷ ಅಮರನಾಥ ಗೌಡ, ಸಂಚಾಲಕ ಸುರೇಶ್ ಬಾಬು ಇದ್ದರು.
ಹೆಚ್ಚಿನ ಮಾಹಿತಿಗಾಗಿ www.akkaonline.org ವೆಬ್ಸೈಟ್ ನೋಡಬಹುದು.