ತಲಕಾಡು ಎಸ್ಐ ವಿರುದ್ಧ ಮತ್ತೆ ಆಕ್ರೋಶ
ಟಿ. ನರಸೀಪುರ: ಸಾರ್ವಜನಿಕರ ಕುಂದುಕೊರತೆಯನ್ನು ಆಲಿಸದ ತಲಕಾಡು ಪೊಲೀಸ್ ಸಬ್ಇನ್ಸ್ಪೆಕ್ಟರ್ ಎಸ್.ಆನಂದ್, ಸ್ಥಳೀಯರ ನಡುವೆಯೇ ಎತ್ತಿಕಟ್ಟುವ ಕೆಲಸ ಮಾಡುತ್ತಾ ಸಂಘರ್ಷ ಸೃಷ್ಟಿಸಿ, ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ತಲಕಾಡು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆರೋಪಿಸಿದರು.
ಪಟ್ಟಣದಲ್ಲಿ ಬುಧವಾರ ಸಭೆ ಸೇರಿದ ಗ್ರಾಮಸ್ಥರು ಹಾಗೂ ಮುಖಂಡರು, ಸಾರ್ವಜನಿಕರ ಸಮಸ್ಯೆಗಳೆಂದರೆ ನಿರ್ಲಕ್ಷ್ಯ ಭಾವನೆಯಿಂದ ನೋಡುವ ತಲಕಾಡು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಸ್. ಆನಂದ್ ಅವರು, ದೂರು ನೀಡಲು ಹೋಗುವವರೊಂದಿಗೆ ಅಸಭ್ಯವಾಗಿಯೇ ವರ್ತಿಸುತ್ತಾರೆ. ಪ್ರಕರಣಗಳನ್ನು ಇತ್ಯರ್ಥಪಡಿಸುವ ಬದಲು ಒಬ್ಬರನ್ನೊಬ್ಬರ ಮೇಲೆ ಗಲಾಟೆ ಮಾಡುವಂತೆ ಪ್ರೇರಣೆ ನೀಡುತ್ತಾರೆ ಎಂದು ಆರೋಪಿಸಿದರು.
ಕಳೆದ ಮಾ.13ರಂದು ಪರಿಣಾಮಿಪುರದಲ್ಲಿ ನಡೆದ ಸಣ್ಣ ತಗಾದೆಯನ್ನು ಸ್ಥಳೀಯವಾಗಿ ಸರಿಯಪಡಿಸಬಹುದಿತ್ತು. ಆರಕ್ಷಕರೇ ಸ್ಥಳೀಯರನ್ನು ಪ್ರಚೋದಿಸುವ ಕೆಲಸ ಮಾಡಿದ್ದರಿಂದ ಎರಡು ದಿನಗಳ ಕಾಲ ಪ್ರಕ್ಷುಬ್ಧ ಮಾದರಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಯಾವುದೇ ಸಂಘರ್ಷದ ತಿರುವು ಪಡೆದುಕೊಳ್ಳಲಿಲ್ಲ. ಆದ್ದರಿಂದ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಎಸ್ಐ ಆನಂದ್ ಅವರನ್ನು ವರ್ಗಾವಣೆ ಮಾಡಿ, ಬೇರೆ ಅಧಿಕಾರಿಯನ್ನು ನಿಯೋಜಿಸಬೇಕು ಎಂದು ಆಗ್ರಹಿಸಿದರು. ತಲಕಾಡು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಸ್. ಆನಂದ್ ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಮಾ.28ರಂದು ಆರಂಭವಾಗಲಿರುವ ಪ್ರತಿಭಟನಾ ಧರಣಿಗೆ ಬೆಂಬಲಿಸಿ, ಭಾಗವಹಿಸಲಾಗುವುದು ಎಂದು ಸಭೆಯ ನೇತೃತ್ವ ವಹಿಸಿದ್ದ ಪಿಎಲ್ಡಿ ಬ್ಯಾಂಕ್ ಮಾಜಿ ನಿರ್ದೇಶಕ ಕಾವೇರಿಪುರ ಮಹದೇವಸ್ವಾಮಿ ತಿಳಿಸಿದರು.
ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಎಸ್ಐ ಆನಂದ್ ಅವರ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ದಕ್ಷಿಣ ವಲಯದ ಐಜಿಪಿ ಹಾಗೂ ಗೃಹ ಸಚಿವರು ಕೂಡಲೇ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಕಾಲದವರೆಗೆ ನಡೆಯುವ ಹೋರಾಟದಲ್ಲಿ ತಲಕಾಡು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸುವರು ಎಂದು ಸಭೆಯಲ್ಲಿ ಎಚ್ಚರಿಸಿದರು. ಸಭೆಯಲ್ಲಿ ಮಹೇಶ್, ಲಿಂಗರಾಜು, ರಂಗಸ್ವಾಮಿ, ಮಹದೇವ, ಶಿವಮಲ್ಲು, ಬಿ.ಎಸ್. ನಾಗರಾಜು, ರಾಜೇಶ್, ಸುನಿಲ್, ನಾಗರಾಜು, ಚಲುವರಾಜು, ರವಿ, ರಾಜೇಶ್, ರಾಜೇಶ್, ಕಟ್ಟಪುರ ನಾಗರಾಜು, ಬಣವೆ ನಾಗರಾಜು, ಮಾದೇಶ, ರವಿಕುಮಾರ, ಟಿ. ದೊಡ್ಡಪುರ ಮಾದೇಗೌಡ, ರಾಜಣ್ಣ, ಮೂರ್ತಿ, ಮಲ್ಲೇಶ ಭಾಗವಹಿಸಿದ್ದರು.