ಪ್ರಚಾರ ಅನುಮತಿಗೆ ಸೂಚನೆ
ಮೈಸೂರು: ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಚುನಾವಣಾ ಸಂಬಂಧ ರಾಜಕೀಯ ಸಭೆ, ಸಮಾರಂಭ ಅಥವಾ ಇತರೇ ಚಟುವಟಿಕೆ ನಡೆಸಲು ಕಡ್ಡಾಯವಾಗಿ 24 ಗಂಟೆಗಳ ಮುಂಚಿತವಾಗಿ ಕೋರಿಕೆ ಸಲ್ಲಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಸೂಚಿಸಿದ್ದಾರೆ.
ಲೋಕಸಭಾ ಚುನಾವಣೆ ಪ್ರಯುಕ್ತ ಎಲ್ಲ ರಾಜಕೀಯ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಗಳು ಹಾಗೂ ಪಕ್ಷದ ಏಜೆಂಟ್ಗಳು ರಾಜಕೀಯ ಸಭೆ, ಸಮಾರಂಭ, ಪಾದಯಾತ್ರೆ, ರೋಡ್ ಶೋ ಮುಂತಾದ ರಾಜಕೀಯ ಚಟುವಟಿಕೆಗಳನ್ನು ನಡೆಸಲು ಚುನಾವಣಾ ಆಯೋಗ/ ಪೋಸ್ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಈಗಾಗಲೇ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ರಾಜಕೀಯ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡುವ ಸಂಬಂಧ ಏಕಗವಾಕ್ಷಿ ಘಟಕ ತೆರೆದು, ಈಗಾಗಲೇ ಅನುಮತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಜಕೀಯ ಚಟುವಟಿಕೆಗಳಿಗೆ ಅನುಮತಿ ಪಡೆಯಲು ಸಮಾರಂಭಕ್ಕೆ ಕೆಲವೇ ಗಂಟೆಗಳ ಮುಂಚಿತವಾಗಿ ಅಭ್ಯರ್ಥಿಗಳು/ ಪಕ್ಷದ ಏಜೆಂಟರು ಬಂದು ಅನುಮತಿ ಕೋರುತ್ತಿರುವುದು ಕಂಡುಬಂದಿದೆ. ಆದರೆ, ಅನುಮತಿ ನೀಡುವ ಮುನ್ನ ಸ್ಥಳ ಪರಿಶೀಲನೆ, ವಾಹನ ಪರಿಶೀಲನೆ ಹಾಗೂ ಎಆರ್ಒಗಳ ಅನುಮತಿ ಸೇರಿದಂತೆ ಎಲ್ಲ ಪ್ರಕ್ರಿಯೆ ಮುಗಿಸಲು ಸಾಕಷ್ಟು ಸಮಯ ಬೇಕಾಗಿರುತ್ತದೆ. ಹೀಗಾಗಿ 24 ಗಂಟೆಗಳ ಮುಂಚಿತವಾಗಿ ಅನುಮತಿಗಾಗಿ ಕೋರಿಕೆ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.