ಅಕ್ರಮ ಗಾಂಜಾ ವಶ: ಆರೋಪಿಗಳು ಪರಾರಿ
ಹುಣಸೂರು: ಸಹೋದರರಿಬ್ಬರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 350 ಗ್ರಾಂ ಗಾಂಜಾವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ಎಚ್.ಡಿ. ಕೋಟೆ ತಾಲೂಕು ಡಿ.ಬಿ. ಕುಪ್ಪೆ ಗ್ರಾಪಂ ವ್ಯಾಪ್ತಿಯ ಕಡೇಗದ್ದೆ ಗ್ರಾಮದ ಚಿನ್ನು ಬಿನ್ ಮಲ್ಲೇಗೌಡ ಹಾಗೂ ಆತನ ಸಹೋದರ ಸುಂದರ್ ಪರಾರಿಯಾದ ಆರೋಪಿಗಳು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ಕೇರಳ ಗಡಿಭಾಗದ ಎಚ್.ಡಿ. ಕೋಟೆ ತಾಲೂಕಿನ ಗಡಿಭಾಗಗಳಲ್ಲಿ ಅಕ್ರಮ ಮದ್ಯ ಇನ್ನಿತರ ವಸ್ತುಗಳ ಮಾರಾಟ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ, ಎರಡು ರಾಜ್ಯಗಳು ಸೇರಿ ಜಂಟಿ ಗಸ್ತು ನಡೆಸುತ್ತಿದ್ದವು. ಇದೇ ವೇಳೆ ಇಲಾಖೆಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಎಚ್.ಡಿ. ಕೋಟೆಯ ಬಾವಲಿ ಗೇಟ್ ಸಮೀಪದ ಕೆ.ಎಸ್. ರೆಸಾರ್ಟ್ ಬಳಿ ಆಮ್ಲೆಟ್ ಹೊಟೇಲ್ ನಡೆಸುತ್ತಿದ್ದ ಚಿನ್ನು ತನ್ನಲ್ಲಿಗೆ ಬಂದ ಗಿರಾಕಿಗಳಿಗೆ ಗಾಂಜಾ ಪೂರೈಸುತ್ತಿದ್ದ.
ವಿಷಯ ತಿಳಿದು ಆತನ ಮನೆಯ ಮೇಲೆ ದಾಳಿ ನಡೆಸಿದಾಗ ಅಡುಗೆಮನೆಯ ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟಿದ್ದ 200 ಗ್ರಾಂ ಹಾಗೂ ಬೈಕ್ನಲ್ಲಿಟ್ಟಿದ್ದ 50 ಗ್ರಾಂ ಒಣಗಿದ ಗಾಂಜಾವನ್ನು ವಶಪಡಿಸಿಕೊಳ್ಳಲಾಯಿತು. ಚಿನ್ನುವಿನ ಸಹೋದರ ಸುಂದರ್ ಬಗ್ಗೆ ಅನುಮಾನಗೊಂಡ ಅಧಿಕಾರಿಗಳು ಅವನ ಮನೆ ಮೇಲೆ ದಾಳಿ ನಡೆಸಿದಾಗ ಅಲ್ಲಿದ್ದ 100 ಗ್ರಾಂ ಒಣ ಗಾಂಜಾ ವಶಪಡಿಸಿಕೊಂಡರು.
ಕಾರ್ಯಾಚರಣೆಯಲ್ಲಿ ಹುಣಸೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಆರ್.ನಾಗಶಯನ, ನಿರೀಕ್ಷಕರಾದ ಕೆ.ಶ್ರೀನಿವಾಸ್, ರಕ್ಷಕರಾದ ಎಸ್.ಎ. ಬೇಗ್, ಮಲ್ಲಿಕಾರ್ಜುನ ಕುಂಬಾರ್, ಮಾನಂದವಾಡಿ ವಲಯದ ವಿ.ಮಣಿ ಹಾಗೂ ಇ. ಅನೂಪ್ ಭಾಗವಹಿಸಿದ್ದರು.