ಅರಣ್ಯಕ್ಕೆ ಬೆಂಕಿ: ತಪ್ಪಿದ ಅನಾಹುತ
ಬೈಲಕುಪ್ಪೆ: ಬೈಲಕುಪ್ಪೆ ಸಮೀಪ ಮೀಸಲು ಅರಣ್ಯಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಬೈಲಕುಪ್ಪೆ ಸಮೀಪದ ಬಿ.ಎಂ ರಸ್ತೆಯ ಬದಿಯಲ್ಲಿ ಗುರುವಾರ ಮಧ್ಯಾಹ್ನ ಯಾರೋ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯು ಸಮೀಪದ ಹೊಂಗೆ ತೋಟಕ್ಕೂ ತಗುಲಿದೆ. ಕೂಡಲೇ ಪಿರಿಯಾಪಟ್ಟಣ ಹಾಗೂ ಕುಶಾಲನಗರದಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಬಾರದಿದ್ದರೆ ಹೆಚ್ಚಿನ ಅನಾಹುತ ಸಂಭವಿಸುತ್ತಿತ್ತು ಎನ್ನಲಾಗಿದೆ. ಈ ವೇಳೆ ಪಿರಿಯಾಪಟ್ಟಣ ಅಗ್ನಿಶಾಮಕ ದಳದ ಠಾಣಾಧಿಕಾರಿ ಟಿ.ಸಿ. ಚಂದ್ರು, ಸಿಬ್ಬಂದಿ ಮಂಜುನಾಥ್, ರವಿ ಮತ್ತು ಕುಶಾಲನಗರದ ಅಗ್ನಿಶಾಮಕ ದಳದ ಸಿಬ್ಬಂದಿ ಭೀಮಯ್ಯ, ಜನಾರ್ಧನ, ನಿಂಗಪ್ಪ ಅರಣ್ಯಾಧಿಕಾರಿ ರವೀಂದ್ರ, ಗಾರ್ಡ್ ದಂಡಯ್ಯ, ಬೈಲಕುಪ್ಪೆ ಗ್ರಾಪಂ ಮಾಜಿ ಸದಸ್ಯ ಭರತ್ ರಾಜೇ ಅರಸ್, ಮುತ್ತಿನ ಮುಳುಸೋಗೆಯ ಸುರೇಶ್ ಇದ್ದರು.