'ಕಾಂಗ್ರೆಸ್, ಬಿಜೆಪಿ ನಡುವೆ ಒಳ ಒಪ್ಪಂದ'
ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಳಒಪ್ಪಂದ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು. ರಾಮಕೃಷ್ಣನಗರದ ಅಮ್ಮ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಅವರು ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಅವರೊಂದಿಗೆ ಫ್ರೆಂಡ್ಲಿ ಮ್ಯಾಚ್ ಎಂದು ಹೇಳಿದ್ದಾರೆ. ಇದರ ಅರ್ಥ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಒಳಬಪ್ಪಂದ ನಡೆದಿದೆ ಎಂದು ತಿಳಿಯಬೇಕು. ಆದರೆ ನಾವು ಜನರೊಂದಿಗೆ ಫ್ರೆಂಡ್ಲಿ ಮ್ಯಾಚ್ ಆಡೋಣ ಎಂದು ಕಾರ್ಯಕರ್ತರಿಗೆ ಅವರು ಕರೆ ನೀಡಿದರು.
ಬಿಜೆಪಿ ನಡುವೆ ಮಾತ್ರವೇ ನಮ್ಮ ನೇರ ಹಣಾಹಣಿ. ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕು. ಮೈಸೂರು ಜೆಡಿಎಸ್ ಪ್ರಭಾವವಿರುವ ವಲಯ. ಈ ಭಾಗದಲ್ಲಿ 3 ಮಂದಿ ಶಾಸಕರು 22 ಮಂದಿ ನಗರ ಪಾಲಿಕೆ ಸದಸ್ಯರು ಇದ್ದಾರೆ. ಈ ಕ್ಷೇತ್ರವನ್ನು ಗೆಲ್ಲಲೇ ಬೇಕೆಂಬುದು ಪಕ್ಷದ ಸವಾಲಾಗಿದೆ. ಅಭ್ಯರ್ಥಿ ಯಾರೇ ಆಗಿರಲಿ, ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಮುಖ ನೋಡಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದ ಅವರು, ಈ ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಫಲಿತಾಂಶದಲ್ಲೂ ಅಚ್ಚರಿ ಕಾದಿದೆ ಎಂದರು.
ಶಾಸಕ ಸಾ.ರಾ. ಮಹೇಶ್, ಸಂದೇಶ್ ನಾಗರಾಜ್ ಹಾಗೂ ಮಾಜಿ ಶಾಸಕ ಎಚ್.ಎಸ್. ಶಂಕರಲಿಂಗೇಗೌಡ ಮಾತನಾಡಿದರು. ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ. ದೇವೇಗೌಡ ಲೋಕಸಭಾ ಅಭ್ಯರ್ಥಿ ನಿವೃತ್ತ ನ್ಯಾಯಮೂರ್ತಿ ಕೆ. ಚಂದ್ರಶೇಖರಯ್ಯ ಅವರನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ದಿ. ನಜೀರ್ ಸಾಬ್ ಅವರ ಪುತ್ರ ಮುನಿರ್ ಅಹಮದ್ ಹಾಗೂ ಸಿದ್ದರಾಮನಹುಂಡಿಯ ಕಾಂಗ್ರೆಸ್ ಮುಖಂಡ ಸೋಮಶೇಖರ ಮತ್ತಿತರ ಮುಖಂಡರು ಜೆಡಿಎಸ್ ಪಕ್ಷ ಸೇರಿದರು.
ಶಾಸಕ ಎಸ್. ಚಿಕ್ಕಮಾದು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ. ಶಿವಣ್ಣ, ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ, ಮೇಯರ್ ಎಂ.ಎನ್. ರಾಜೇಶ್ವರಿ, ಉಪಮೇಯರ್ ವಿ. ಶೈಲೇಂದ್ರ, ಮಾಜಿ ಮೇಯರ್ ಸಂದೇಶ್ ಸ್ವಾಮಿ, ನಗರಾಧ್ಯಕ್ಷ ರಾಜಣ್ಣ, ಎಸ್ಡಿಪಿಐ ರಾಜ್ಯ ಉಪಾಧ್ಯಕ್ಷ ಪ್ರೊ. ಶಬ್ಬಿರ್ ಮುಸ್ತಾಫ ಇದ್ದರು.
ಶಂಕರಲಿಂಗೇಗೌಡರ ಮನವೊಲಿಕೆ: ಇತ್ತೀಚೆಗೆ ಬಿಜೆಪಿಯಿಂದ ಜೆಡಿಎಸ್ಗೆ ಸೇರ್ಪಡೆಗೊಂಡಿದ್ದ ಮಾಜಿ ಶಾಸಕ ಎಚ್.ಎಸ್. ಶಂಕರಲಿಂಗೇಗೌಡ ಅವರು, ಪಕ್ಷವು ತಮ್ಮನ್ನು ಕಡೆಗಣಿಸುತ್ತಿರುವ ಕಾರಣ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡದೆ ತಟಸ್ಥರಾಗಿ ಉಳಿಯುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಭೇಟಿ ನೀಡಿ, ಮನವೊಲಿಸುವಲ್ಲಿ ಯಶಸ್ವಿಯಾದರು.