ಕೈಗಳ ನರ ಕತ್ತರಿಸಿಕೊಂಡು ಕಾಂಗ್ರೆಸ್ ಮುಖಂಡ ಪಿ. ನಾಗರಾಜ್ ಆತ್ಮಹತ್ಯೆ
ಮೈಸೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಪಿ.ನಾಗರಾಜ್ (71) ಅವರು ಎರಡೂ ಕೈಗಳ ನರಗಳನ್ನು ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ.
ಸಿದ್ದಾರ್ಥ ಬಡಾವಣೆಯ ವಿನಯ ಮಾರ್ಗದಲ್ಲಿರುವ ತಮ್ಮ ಮನೆಯಿಂದ ನಾಗರಾಜ್ ಅವರು ಬೆಳಗ್ಗೆ 9ಕ್ಕೆ ಸ್ಯಾಂಟ್ರೋ ಕಾರಿನಲ್ಲಿ ಹೊರಟರು. ಸಿದ್ದಾರ್ಥ ಸ್ಪೋರ್ಟ್ಸ್ ಕ್ಲಬ್ ಮುಂಭಾಗದ ಉದ್ಯಾನದ ಬಳಿ ಕಾರು ನಿಲ್ಲಿಸಿ, ತಮ್ಮ ಎರಡು ಕೈಗಳ ನರಗಳನ್ನು ಬ್ಲೇಡ್ನಿಂದ ಕತ್ತರಿಕೊಂಡಿದ್ದು, ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.
ಕಾರಿನಿಂದ ರಕ್ತ ಸೋರುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆಗಮಿಸುವಷ್ಟರಲ್ಲಿ ನಾಗರಾಜ್ ಮೃತಪಟ್ಟಿದ್ದರು.
ನಾಗರಾಜ್ ಅವರು ಮಧುಮೇಹದಿಂದ ಬಳಲುತ್ತಿದ್ದು, ಇತ್ತೀಚೆಗೆ ತೀವ್ರ ಅಸ್ವಸ್ಥರಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮಧುಮೇಹ ಉಲ್ಬಣಗೊಂಡಿದ್ದು, ಕೈ ಬೆರಳು ತೆಗೆಯಬೇಕಿದೆ ಎಂದು ವೈದ್ಯರು ಸಲಹೆ ನೀಡಿದ್ದರು. ಪತ್ನಿಯ ಅನಾರೋಗ್ಯ, ಆರ್ಥಿಕ ಸಂಕಷ್ಟ ಮತ್ತಿತರ ಕಾರಣಗಳಿಂದ ಮನನೊಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಕಾರಿನಲ್ಲಿದ್ದ ನೋಟ್ಪ್ಯಾಡ್ನಲ್ಲಿ ನಿಮಗೆಲ್ಲರಿಗೂ ನಮಸ್ಕಾರಗಳು ಎಂದಷ್ಟೇ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ನಜರ್ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರಿಗೆ ಪತ್ನಿ ಜಯಲಕ್ಷ್ಮಿ, ಮಕ್ಕಳಾದ ದಿನೇಶ್, ದಿವ್ಯೇಶ್, ಜಯಶ್ರೀ ಇದ್ದಾರೆ. ಮಾ.28ರ ಮಧ್ಯಾಹ್ನ 1ಕ್ಕೆ ಸಿದ್ದಾರ್ಥ ಬಡಾವಣೆಯಲ್ಲಿರುವ ಮನೆಯಿಂದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಹರಿಶ್ಚಂದ್ರಘಾಟ್ವರೆಗೆ ನಾಗರಾಜ್ ಅವರ ಅಂತಿಮ ಮೆರವಣಿಗೆ ನಡೆಸಿ, ನಂತರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸಹಕಾರಿ ನಾಗರಾಜ್: ನಾಗರಾಜ್ ಅವರು ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ 20 ವರ್ಷ ಸೇವೆ ಸಲ್ಲಿಸಿದ್ದು, 2001 ರಿಂದ 2003 ರವರೆಗೆ ಬ್ಯಾಂಕ್ನ ಅಧ್ಯಕ್ಷರಾಗಿದ್ದರು. ಇತ್ತೀಚೆಗೆ ನಡೆದ ಬ್ಯಾಂಕ್ ಚುನಾವಣೆಯಲ್ಲಿ ಬಳಕೆದಾರರ ಕ್ಷೇತ್ರದಿಂದ ಸ್ಪರ್ಧಿಸಿ ಎಸ್.ಬಿ.ಎಂ. ಮಂಜು ಎದುರು ಪರಾಭವಗೊಂಡಿದ್ದರು.
ದಿ.ಮೈಸೂರು ಕೋ-ಆಪರೇಟಿವ್ ಬ್ಯಾಂಕ್ನಲ್ಲಿ ನಾಲ್ಕು ಬಾರಿ ಅಧ್ಯಕ್ಷರಾಗಿ, ಜನತಾ ಬಜಾರ್ ಅಧ್ಯಕ್ಷರಾಗಿ, ಕರ್ನಾಟಕ ಫುಟ್ಬಾಲ್ ಫೆಡರೇಷನ್ ನಿರ್ದೇಶಕರು, ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾಗಿದ್ದರು. ಶಾಸಕ ವಾಸು ಅವರು ಮೇಯರ್ ಆಗಿದ್ದಾಗ ಪಾಲಿಕೆ ಸದಸ್ಯರಾಗಿ ನಾಗರಾಜ್ ಸೇವೆ ಸಲ್ಲಿಸಿದ್ದರು.
ಮುಖಂಡರ ಭೇಟಿ: ಶಾಸಕರಾದ ವಾಸು, ತನ್ವೀರ್ ಸೇಠ್, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ನಿರ್ದೇಶಕ ಎಸ್.ಬಿ.ಎಂ. ಮಂಜು, ಪಾಲಿಕೆ ಸದಸ್ಯರಾದ ಅನಂತು, ಮಹದೇವಮ್ಮ, ಮಾಜಿ ಮೇಯರ್ ಟಿ.ಬಿ. ಚಿಕ್ಕಣ್ಣ, ಕಾಂಗ್ರೆಸ್ ಮುಖಂಡರಾದ ಪ್ರಕಾಶ್ಕುಮಾರ್, ಕೃಷ್ಣಪ್ಪ, ಹಿನಕಲ್ ಪ್ರಕಾಶ್ ಅಂತಿಮ ದರ್ಶನ ಪಡೆದರು.