ಡಾಕ್ಟರೇಟ್
ಮೈಸೂರು: ಡಾ.ಜಿ.ಎಸ್. ಪ್ರೇಮಕುಮಾರ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಎನ್.ಡಿ. ಉಷಾರಾಣಿ ಅವರಿಗೆ ಅರ್ಥಶಾಸ್ತ್ರ, ಡಿಎಫ್ಆರ್ಎಲ್ ಹಿರಿಯ ವಿಜ್ಞಾನಿ ಡಾ.ಎಚ್.ಎಸ್. ಮುರಳಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ವೈ.ವಿದ್ಯಾ ಅವರಿಗೆ ಜೈವಿಕ ತಂತ್ರಜ್ಞಾನ ಹಾಗೂ ಡಾ.ಕೆ.ಆರ್. ಅನಿಲಕುಮಾರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ವಿ.ಸರಿತಾ ಅವರಿಗೆ ಆಹಾರ ವಿಜ್ಞಾನ ವಿಷಯದಲ್ಲಿ ಮೈಸೂರು ವಿವಿ ಪಿಎಚ್.ಡಿ ಪದವಿ ನೀಡಿದೆ.
ಧರಣಿ
ಮೈಸೂರು: ಪುನರಾವರ್ತಿತ ಅಭ್ಯರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಯುವರಾಜ ಕಾಲೇಜಿನ ಕ್ರಮ ಖಂಡಿಸಿ ಬಹುಜನ ವಿದ್ಯಾರ್ಥಿ ಸಮಾಜದ (ಬಿವಿಎಸ್) ಕಾರ್ಯಕರ್ತರು ಗುರುವಾರ ಪ್ರತಿಭಟಿಸಿದರು. ಯುವರಾಜ ಕಾಲೇಜಿನಿಂದ ಮೈಸೂರು ವಿವಿಯ ಕ್ರಾಫರ್ಡ್ ಭವನದವರೆಗೆ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು, ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಘೋಷಣೆ ಕೂಗಿದರು. ಹೆಚ್ಚುವರಿ ಶುಲ್ಕ ವಸೂಲಿಯ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಪರೀಕ್ಷಾ ಶುಲ್ಕ ಪಾವತಿ ಕುರಿತು ವಿವಿ ಏಕರೂಪ ನೀತಿ ಇದೆ. ಇತ್ತೀಚೆಗೆ ಹೊರಡಿಸಿದ ಆದೇಶವು ಯುವರಾಜ ಕಾಲೇಜು ತಲುಪಿಲ್ಲ. ಸ್ವಾಯತ್ತ ಕಾಲೇಜು ಆಗಿರುವ ಕಾರಣಕ್ಕೆ ನೂತನ ವ್ಯವಸ್ಥೆ ಮಾಡಿಕೊಂಡಿದೆ. ಈ ಕುರಿತು ಕಾಲೇಜು ಪ್ರಾಂಶುಪಾಲರೊಂದಿಗೆ ಚರ್ಚಿಸಿ, ವಿವಿ ನೀತಿ ಅನುಸರಿಸುವಂತೆ ಸೂಚಿಸಲಾಗುವುದು ಎಂದು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ರುದ್ರಯ್ಯ ಅವರು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು. ಬಿವಿಎಸ್ ನಗರ ಸಂಚಾಲಕ ಗಣೇಶಮೂರ್ತಿ, ವಿದ್ಯಾರ್ಥಿಗಳಾದ ಪ್ರತಾಪ್, ನವೀನ್ ಇದ್ದರು.
ಗಣಪತಿ ಹೋಮ
ಮೈಸೂರು: ವಿಜಯನಗರದ ವಿಜಯಮಹಾಗಣಪತಿ ದೇವಸ್ಥಾನದಲ್ಲಿ ಏ. 2 ಮತ್ತು 3 ರಂದು ಏಳನೇ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿಯ ಧರ್ಮದರ್ಶಿ ಕೆ. ರಘುರಾಂ ಹೇಳಿದರು. ಏ. 2 ರಂದು ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಹೋಮ ನಡೆಯಲಿದ್ದು, 3 ರಂದು ಲಕ್ಷ ಮೋದಕ ಮಹಾಗಣಪತಿ ಹೋಮ ನಡೆಯಲಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅದೇ ದಿನ ಮಧ್ಯಾಹ್ನ 12. 15 ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜ್ಯೋತಿಷ್ಯ ವಿದ್ವಾಂಸ ಸಿದ್ಧಾಂತಿ ಡಾ.ಕೆ.ಜಿ. ಪುಟ್ಟಹೊನ್ನಯ್ಯ ಉದ್ಘಾಟಿಸುವರು. ಮಂತ್ರಾಲಯ ಮಠದ ಆಪ್ತ ಕಾರ್ಯದರ್ಶಿ ರಾಜಾ ಎಸ್. ರಾಜಗೋಪಾಲಚಾರ್ಯ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ವಿ ರಾಜೀವ್, ಆಗಮಿಕ ಮೈ.ವಿ. ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ವಾಹನ ತಪಾಸಣೆ
ಮೈಸೂರು: ನಗರ ಸಂಚಾರ ಪೊಲೀಸರು ಬುಧವಾರ ಮ್ಯಾಕ್ಸಿ ಕ್ಯಾಬ್ ಹಾಗೂ ಟೆಂಪೋಗಳ ವಿರುದ್ಧ ವಿಶೇಷ ತಪಾಸಣೆ ನಡೆಸಿ ಒಟ್ಟು 202 ಪ್ರಕರಣಗಳನ್ನು ದಾಖಲಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿದ 202 ವಾಹನ ಚಾಲಕರು ಮತ್ತು ಮಾಲೀಕರಿಂದ ಒಟ್ಟು 23,400 ದಂಡ ವಸೂಲಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎಂ. ಸಲೀಂ ತಿಳಿಸಿದ್ದಾರೆ.
ಮಹಿಳೆ ನಾಪತ್ತೆ
ಮೈಸೂರು: ಮಂಡಿ ಠಾಣೆ ವ್ಯಾಪ್ತಿಯ ನಿವಾಸಿ ಸರ್ವತ್ ಜಹಾ (27) ಭಾನುವಾರ ಮರಾಠ ರಾಮಮಂದಿರದ ಗಲ್ಲಿಯಲ್ಲಿರುವ ಚಿಕ್ಕಮ್ಮನ ಮನೆಗೆ ಹೋದವರು ನಾಪತ್ತೆಯಾಗಿದ್ದಾರೆ. ಚಹರೆ- 4.8 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಉಬ್ಬು ಹಲ್ಲು, ಕನ್ನಡ ಮತ್ತು ಉರ್ದು ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ.0821- 2418313 ಸಂಪರ್ಕಿಸಲು ಮಂಡಿ ಠಾಣೆ ಎಎಸ್ಐ ನಾಗಮ್ಮ ಕೋರಿದ್ದಾರೆ.
ವಿಶ್ವನಾಥ್ ಆದಿಶ್ರೀಗಳ ಭೇಟಿ
ಮೈಸೂರು: ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳನ್ನು ಸಂಸದ ಎಚ್. ವಿಶ್ವನಾಥ್ ಭೇಟಿಯಾಗಿ ಆಶೀರ್ವಾದ ಪಡೆದರು. ನಗರದ ಆದಿಚುಂಚನಗಿರಿ ಶಾಖಾ ಮಠಕ್ಕೆ ಆಗಮಿಸಿದ್ದ ಶ್ರೀಗಳನ್ನು ಭೇಟಿಯಾದ ವಿಶ್ವನಾಥ್ ಶ್ರೀಗಳ ಆಶೀರ್ವಾದ ಕೋರಿದರು. ಈ ವೇಳೆ ಶ್ರೀಗಳು ಫಲತಾಂಬೂಲ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಮಾಜಿ ಶಾಸಕ ಡಿ. ಮಾದೇಗೌಡ, ಮುಖಂಡರಾದ ಮೂರ್ತಿ, ಭಾಸ್ಕರ್, ಕೆ.ಎಸ್. ಶಿವರಾಮು ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.