ತೀವ್ರಗೊಂಡ ಐಜಿಪಿ ಗನ್ಮ್ಯಾನ್ ವಿಚಾರಣೆ
ಮೈಸೂರು: ಕೇರಳಕ್ಕೆ ಹೋಗುತ್ತಿದ್ದ ಖಾಸಗಿ ಬಸ್ನಿಂದ ಪೊಲೀಸರೇ ಹಣ ಡಕಾಯಿತಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ದಕ್ಷಿಣ ವಲಯದ ಐಜಿಪಿ ಅವರ ಗನ್ಮ್ಯಾನ್ ಪ್ರಕಾಶ್ ವಿಚಾರಣೆಯನ್ನು ಸಿಐಡಿ ಪೊಲೀಸರು ತೀವ್ರಗೊಳಿಸಿದ್ದಾರೆ. ಹಣ ಡಕಾಯಿತಿ ಪ್ರಕರಣದಲ್ಲಿ ಪ್ರಕಾಶ್ ಪಾತ್ರ ಇರುವುದು ಖಚಿತವಾದ ಹಿನ್ನೆಲೆಯಲ್ಲಿ ಸೋಮವಾರ ಆತನನ್ನು ಬಂಧಿಸಿ, ನ್ಯಾಯಾಲಯದ ಮೂಲಕ ನಾಲ್ಕು ದಿನ ತಮ್ಮ (ಪೊಲೀಸ್ ಕಸ್ಟಡಿ) ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಖಾಸಗಿ ಬಸ್ನಲ್ಲಿ ಹಣ ಸಾಗಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಸಲೀಂ, ಶರೀಫ್ ಮತ್ತು ಮುಸ್ತಾಕ್ ಎಂಬ ಬಾತ್ಮೀದಾರರನ್ನು ಸಹ ಪೊಲೀಸರು ಬಂಧಿಸಿದ್ದರು. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐ ಜಗದೀಶ್, ಪೇದೆಗಳಾದ ಸತೀಶ್ ಮತ್ತು ಲತೀಫ್ನನ್ನು ಬಂಧಿಸಲಾಗಿದೆ ಎಂಬುದು ಕೇವಲ ವದಂತಿ. ದಕ್ಷಿಣ ವಲಯದ ಐಜಿಪಿ ಡಾ.ಕೆ.ರಾಮಚಂದ್ರರಾವ್ ಅವರನ್ನು ನಾವು (ಸಿಐಡಿ ಪೊಲೀಸರು) ವಿಚಾರಣೆಗೊಳಪಡಿಸಿಲ್ಲ ಎಂದು ಸಿಐಡಿ ಡಿಐಜಿ ಸೌಮೇಂದು ಮುಖರ್ಜಿ 'ಕನ್ನಡಪ್ರಭ'ಕ್ಕೆ ತಿಳಿಸಿದರು.