ಬೆಟ್ಟ, ಮಾರುಕಟ್ಟೆಯಲ್ಲಿ ವಿಶ್ವನಾಥ್ ಮತಯಾಚನೆ
ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸಂಸದ ಎಚ್.ವಿಶ್ವನಾಥ್ ಅವರು ಚಾಮುಂಡಿಬೆಟ್ಟದ ತಪ್ಪಲು ಹಾಗೂ ಎಂ.ಜಿ. ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಗುರುವಾರ ಮುಂಜಾನೆ ಮತಯಾಚಿಸಿದರು. ಚಾಮುಂಡಿಬೆಟ್ಟದ ಪಾದದ ಬಳಿ ವಾಯುವಿಹಾರಕ್ಕೆ ಬಂದಿದ್ದ ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸುವ ಮೂಲಕ ಮತಯಾಚಿಸಿದರು. ಈ ವೇಳೆ ವಾಯುವಿಹಾರಕ್ಕೆ ಆಗಮಿಸಿದ್ದ ವಿದೇಶಿ ಮಹಿಳೆಯೊಬ್ಬರು ವಿಶ್ವನಾಥ್ ಅವರಿಗೆ ಶುಭ ಕೋರಿದರು.
ನಂತರ ಎಂ.ಜಿ. ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಮತ್ತು ಗ್ರಾಹಕರನ್ನು ಭೇಟಿಯಾಗಿ ಮತಯಾಚಿಸಿದರು. ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು, ಮಾಜಿ ಮೇಯರ್ ಟಿ.ಬಿ. ಚಿಕ್ಕಣ್ಣ, ಮುಖಂಡರಾದ ಪ್ರಕಾಶ್, ಕಾಂತರಾಜ್, ಚಂದ್ರಕುಮಾರ್, ಮಹದೇವಸ್ವಾಮಿ, ಟಿ. ಹೇಮಾವತಿ, ಡಾ.ಎಚ್.ಟಿ. ಚಿದಾನಂದ ಮೊದಲಾದವರು ಇದ್ದರು.
ಕಾಂಗ್ರೆಸ್, ಜೆಡಿಎಸ್ಗೆ ನೇಮಕ
ಮೈಸೂರು: ಸಾಹುಕಾರ್ ಚೆನ್ನಯ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅಂಬೇಡ್ಕರ್ ನಗರದ ಆರ್.ಸಿದ್ದರಾಜು ಹಾಗೂ ಜೆಡಿಎಸ್ ಮಹಿಳಾ ಘಟಕದ ನರಸಿಂಹರಾಜ ಬ್ಲಾಕ್ ಅಧ್ಯಕ್ಷೆಯಾಗಿ ಜ್ಯೋತಿನಗರದ ಪಿ. ಅಶ್ವಿನಿ ಅವರನ್ನು ನೇಮಕ ಮಾಡಲಾಗಿದೆ.