ಮಂಡ್ಯ ಕಾಂಗ್ರೆಸ್ನಲ್ಲಿ ಭಿನ್ನಮತ
ಬೆಂಗಳೂರು/ ಮಂಡ್ಯ: ಜಿಲ್ಲಾ ಕಾಂಗ್ರೆಸ್ನಲ್ಲಿನ ಭಿನ್ನಮತ ಶಮನ ಮಾಡಲು ಕೈ ನಾಯಕರ ಕಸರತ್ತಿಗೆ ಪ್ರತಿಫಲವೇ ಸಿಗುತ್ತಿಲ್ಲ. ಡಿಸಿಸಿ ಅಧ್ಯಕ್ಷ ಆತ್ಮಾನಂದ ಅವರನ್ನು ಬದಲಾವಣೆ ಮಾಡುವ ತೀರ್ಮಾನಕ್ಕೆ ಹಿರಿಯ ಕಾಂಗ್ರೆಸ್ಸಿಗ ಎಸ್.ಎಂ.ಕೃಷ್ಣ ನಕಾರ ಸೂಚಿಸಿರುವುದು ಕಾಂಗ್ರೆಸ್ನಲ್ಲಿ ಮತ್ತೊಂದು ಹೊಸ ವಿವಾದಕ್ಕೆ ಕಾರಣವಾಗಿದೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಎಲ್ಲವೂ ಸರಿಯಾಗಿದೆ ಎನ್ನುವ ವೇಳೆಗೆ ಬಣಗಳಲ್ಲಿನ ಭಿನ್ನಮತ ಮಾತ್ರ ದಿನದಿಂದ ದಿನಕ್ಕೆ ಮಾತ್ರ ಒಳ ಒಳಗೆ ಸಾಕಷ್ಟು ಕುದಿಯುತ್ತಿದೆ. ಆತ್ಮಾನಂದ ಅವರನ್ನು ಬದಲಿಸುವ ಕಸರತ್ತಿನಲ್ಲಿ ಕೊಂಚ ವಿಫಲ ಕಂಡ ಕೂಡಲೇ ಅಂಬರೀಷ್ ಬಣದ ನಾಯಕರೆಲ್ಲಾ ಮಲೇಷಿಯಾಕ್ಕೆ ಬುಧವಾರ ರಾತ್ರಿಯೇ ದಿಢೀರ್ ತೆರಳಿದ್ದಾರೆ.
ತಮ್ಮ ನಾಯಕ ಅಂಬರೀಷ್ ಅವರನ್ನು ಕಂಡು ಜಿಲ್ಲೆಯ ರಾಜಕೀಯ ಬೆಳವಣಿಗೆ ಬಗ್ಗೆ ಸಮಗ್ರವಾಗಿ ಚರ್ಚಿಸಲು ಅಮರಾವತಿ ಚಂದ್ರಶೇಖರ್, ನಗರಸಭೆ ಅಧ್ಯಕ್ಷ ಸಿದ್ದರಾಜು ನೇತೃತ್ವದ 7 ಜನರ ತಂಡ ಮಲೇಷಿಯಾ ತಲುಪಿ ವಿದ್ಯಮಾನಗಳನ್ನು ವಿವರಿಸಿದ್ದಾರೆ ಎಂದು ಹೇಳಲಾಗಿದೆ.
ಅಂಬರೀಷ್ ಬಣದ ಏಕೈಕ ಬೇಡಿಕೆ ಎಂದರೆ ಮೊದಲು ಆತ್ಮಾನಂದ ಅವರನ್ನು ಡಿಸಿಸಿ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಿ ಹಿರಿಯ ವಕೀಲ ಅಮರನಾಥ್ ಅವರನ್ನು ನೇಮಕ ಮಾಡುವುದು. ಒಂದು ವೇಳೆ ಚುನಾವಣೆ ವೇಳೆಯಲ್ಲಿ ಸಾಧ್ಯವಾಗದೇ ಹೋದರೆ ಅಮರನಾಥ್ ನೇತೃತ್ವದಲ್ಲೆ ಅಡ್ಹಾಕ್ ಸಮಿತಿ ನೇಮಕ ಮಾಡುವ ಬಿಗಿ ಪಟ್ಟು ಒಪ್ಪಿಕೊಂಡರೆ ಮಾತ್ರ ರಮ್ಯಾ ಅವರಿಗೆ ಸಮಗ್ರ ನೀಡುವುದಾಗಿ ಅಂಬರೀಷ್ ಬಣದವರು ಕಳೆದ ವಾರ ಪಕ್ಷದ ನಾಯಕರಲ್ಲಿ ಬೇಡಿಕೆಯನ್ನು ಇಟ್ಟಿದ್ದರು.
ಈ ಬೇಡಿಕೆಯನ್ನು ಮನ್ನಿಸಿದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆತ್ಮಾನಂದ ಬದಲಿಸುವ ನಿರ್ಧಾರ ಮಾಡಿದರೂ ಈ ಸಂಗತಿ ತಿಳಿದ ಕೃಷ್ಣ ಗುಂಪು ಬೆಳವಣಿಗೆ ಬಗ್ಗೆ ತಮ್ಮ ನಾಯಕನಿಗೆ ತಿಳಿಸಿತು. ಇದರಿಂದ ಕೃಷ್ಣ ಕೂಡ ಸಾಕಷ್ಟು ಅಸಮಧಾನ ವ್ಯಕ್ತಪಡಿಸಿ ಚುನಾವಣಾ ಸಂದರ್ಭದಲ್ಲಿ ಇಂತಹ ಬದಲಾವಣೆಗಳಿಂದ ವ್ಯತಿರಿಕ್ತ ಪರಿಣಾಮಗಳು ಬೀರುತ್ತವೆ. ಮತ್ತೊಂದು ಸಾರಿ ಆಲೋಚನೆ ಮಾಡಿ ಎಂಬ ಸಂದೇಶವನ್ನು ತಮ್ಮ ಬೆಂಬಲಿಗರ ಮೂಲಕ ಕೆಪಿಸಿಸಿ ನಾಯಕರಿಗೆ ಮುಟ್ಟಿಸಿದರು. ಮಾಜಿ ಕೇಂದ್ರ ಸಚಿವ ಜಿಲ್ಲೆಯ ಹಿರಿಯ ನಾಯಕ ಕೃಷ್ಣ ಗರಂ ಆಗುತ್ತಿದ್ದಂತೆ ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ಸೇರಿದಂತೆ ಪ್ರಮುಖ ನಾಯಕರು ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.