ವಸಾಹತುಶಾಹಿಯಿಂದ ಶಿಕ್ಷಣ ಸಫಲ
ಮೈಸೂರು: ಭಾರತದಲ್ಲಿ ಮೆಕಾಲೆ ವಸಾಹತುಶಾಹಿ ನೀತಿ ಜಾರಿಗೆ ಬಂದ ಮೇಲೆ ಶಿಕ್ಷಣ ಪಡೆಯುವಲ್ಲಿ ಸಫಲರಾಗ ಬೇಕಾಯಿತು ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.
ಮೈಸೂರು ವಿವಿಯ ಶಿಕ್ಷಣಶಾಸ್ತ್ರ ಅಧ್ಯಯನ ವಿಭಾಗವು ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸುಸ್ಥಿರ ಅಭಿವೃದ್ಧಿ ಶಿಕ್ಷಣ ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣದಿಂದ ವಂಚಿತರಾದವರು ಮೆಕಾಲೆಯ ವಸಾಹತುಶಾಹಿ ನೀತಿ ಜಾರಿಗೆ ಬಂದ ಮೇಲೆ ಶಿಕ್ಷಣ ಪಡೆಯುವಲ್ಲಿ ಸಫಲರಾಗಿದ್ದು, ಇಂದಿನ ಶಿಕ್ಷಣದಲ್ಲಿ ಈ ಬೋಧನಾ ಕಲಿಕಾ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳು ಪರೀಕ್ಷಾ ದೃಷ್ಟಿಯಿಂದ ಮಾತ್ರ ವಿದ್ಯಾಭ್ಯಾಸ ಮಾಡುತ್ತಿದ್ದು, ಜ್ಞಾನಾರ್ಜನೆಯ ದೃಷ್ಟಿಯಿಂದ ವಿದ್ಯಾಭ್ಯಾಸ ಮಾಡುತ್ತಿಲ್ಲ. ಜ್ಞಾನ ಹೊಂದುವತ್ತ ಹೆಚ್ಚು ಗಮನ ಹರಿಸಬೇಕು ಎಂದರು.
ಇಂಗ್ಲಿಷ್ ಭಾಷೆಯನ್ನು ಕೇವಲ ಆಡಳಿತ ಭಾಷೆಯನ್ನಾಗಿ ಮಾತ್ರ ಉಪಯೋಗಿಸಿಕೊಂಡು ಮಾತೃ ಭಾಷೆಯಲ್ಲೇ ವ್ಯವಹಾರ ಮಾಡಬೇಕು ಹಾಗೂ ಇಂಗ್ಲಿಷ್ ತಿಳಿದವನೇ ಜ್ಞಾನಿ ಎಂಬ ಭ್ರಮೆ ಸರಿಯಲ ಎಂದು ಅವರು ಆಶಿಸಿದರು. ಮೈಸೂರು ವಿವಿಯ ಕುಲಸಚಿವ ಪ್ರೊ. ಸಿ. ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಎಸ್ಐಒ ರಾಜ್ಯ ಘಟಕ ಅಧ್ಯಕ್ಷ ತೋಸೀಫ್ ಅಹಮದ್ ಮುಖ್ಯ ಅತಿಥಿಯಾಗಿದ್ದರು. ಶಿಕ್ಷಣ ನಿಕಾಯದ ಮುಖ್ಯಸ್ಥೆ ಪ್ರೊ. ಯಶೋದರಾ, ಅಧ್ಯಕ್ಷೆ ಡಾ. ನಿಂಗಮ್ಮ ಸಿ. ಬೆಟ್ಸೂರ್ ಇದ್ದರು.