ಹಳೇ ಮೈಸೂರಲ್ಲಿ ಬಿಜೆಪಿಗೆ ಗೆಲವು
ಟಿ. ನರಸೀಪುರ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಲೆ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ವರ್ಚಸ್ಸಿನಿಂದ ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳೆರಡೂ ಬಿಜೆಪಿ ವಶವಾಗಲಿವೆ ಎಂದು ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಹೇಳಿದರು.
ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಮೋದಿ ಹಾಗೂ ಬಿಎಸ್ವೈ ಅಲೆಗಳೆರಡು ರಾಜ್ಯ ರಾಜಕಾರಣದಲ್ಲಿ ಸುನಾಮಿಯನ್ನೇ ಸೃಷ್ಟಿಸಲಿದೆ. ರಾಜ್ಯದಿಂದ ಕನಿಷ್ಠ 20 ಬಿಜೆಪಿ ಸಂಸದರು ಲೋಕಸಭೆಗೆ ಆಯ್ಕೆಯಾಗಲಿದ್ದಾರೆ. ಕಾಂಗ್ರೆಸ್ ಆರು ಕ್ಷೇತ್ರಗಳಿಗಷ್ಟೇ ಸೀಮಿತವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನರ ನರ ಮೋದಿ ಎಂದು ನರೇಂದ್ರ ಮೋದಿ ಅವರನ್ನು ಟೀಕಿಸುವ ಸಿಎಂ ಸಿದ್ದರಾಮಯ್ಯ, ಯಾವುದೇ ಸಭೆ ಸಮಾರಂಭದಲ್ಲಿ ನಿದ್ದೆ ಮಾಡಿ ವರ್ಷವನ್ನು ಪೂರೈಸಿದ್ದಾರೆ ಎಂದು ಲೇವಡಿ ಮಾಡಿದರು.
ಹಿಂದಿನ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನಷ್ಟೇ ಇಂದಿನ ಕಾಂಗ್ರೆಸ್ ಸರ್ಕಾರ ಪೂರ್ಣಗೊಳಿಸಿದೆ. ದೇವರಾಜ ಅರಸು ನಂತರ ಯಡಿಯೂರಪ್ಪ ಹಿಂದುಳಿದ ವರ್ಗಗಳ ನಾಯಕರಾಗಿದ್ದಾರೆ. ಅವರು ಹಿಂದುಳಿದ ವರ್ಗಗಳಿಗೆ ನೀಡಿದಷ್ಟು ಅನುದಾನವನ್ನು ಸಿದ್ದರಾಮಯ್ಯ ನೀಡಲೇ ಇಲ್ಲ. ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಹಲವಾರು ಚುನಾವಣೆಗಳಲ್ಲಿ ಸೋಲನ್ನುಂಡಿದ್ದಾರೆ. ಅವರನ್ನು ಈ ಬಾರಿಯಾದರೂ ಬೆಂಬಲಿಸಿ ಲೋಕಸಭೆಗೆ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಹಿರಿಯ ಮುಖಂಡ ಪುಟ್ಟಬಸವಯ್ಯ, ಬಿಜೆಪಿ ಕ್ಷೇತ್ರಾಧ್ಯಕ್ಷ ಕೆ.ಎಸ್. ಬಸವರಾಜು, ಜಿಲ್ಲಾ ಉಪಾಧ್ಯಕ್ಷ ಬಸವರಾಜು, ವರುಣ ಪ್ರಧಾನ ಕಾರ್ಯದರ್ಶಿ ಎಂ. ವೆಂಕಟರಮಣಶೆಟ್ಟಿ, ಗ್ರಾಪಂ ಸದಸ್ಯ ಎ.ಎನ್. ರಂಗುನಾಯ್ಕ ಇದ್ದರು.