ಒಡಿಪಿ ಸಂಸ್ಥೆಯಲ್ಲಿ ಮತ ಜಾಗೃತಿ
ಮೈಸೂರು: ಒಡಿಪಿ ಸಂಸ್ಥೆ ಆವರಣದಲ್ಲಿ ಶುಕ್ರವಾರ ಸುಮಾರು 130 ಸಿಬ್ಬಂದಿ ವರ್ಗದವರಿಗೆ ಸ್ವೀಪ್ ಸದಸ್ಯರ ಮುಖಾಂತರ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತ ಚಲಾಯಿಸುವ ಹಕ್ಕಿನ ಅರಿವನ್ನು ಮೂಡಿಸಲಾಯಿತು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎನ್.ಆರ್. ವಿಜಯ್ ಮಾತನಾಡಿ, ಒಡಿಪಿ ಸಂಸ್ಥೆಯ ಕೇಂದ್ರ ಸಂಯೋಜಕರು ಕಾರ್ಯಕರ್ತರ ಮುಖಾಂತರ ಸುಮಾರು 7,500 ಜನರಿಗೆ ಮಾಹಿತಿ ನೀಡಬಹುದು ಎಂದು ತಿಳಿಸಿದರು. ಸಂಸ್ಥೆಯಲ್ಲಿ ಸಿಬ್ಬಂದಿಯ ಪ್ರತಿಕ್ರಿಯೆ ಹಾಗೂ ಉತ್ತಮ ಆಡಳಿತಕ್ಕೆ ಇರುವ ಕಾಳಜಿಯನ್ನು ಪ್ರಶಂಸಿದರು. ಜಿಪಂ ಸಹಾಯಕ ಕಾರ್ಯಕ್ರಮಾಧಿಕಾರಿ ರಾಜಶೇಖರ್ ಮಾತನಾಡಿ, ಒಡಿಪಿ ಎಲ್ಲ ಸಿಬ್ಬಂದಿ ಚುನಾವಣಾ ಮತದಾನದಲ್ಲಿ ತಪ್ಪದೇ ಪಾಲ್ಗೊಳ್ಳಬೇಕೆಂದು ತಿಳಿಸಿದರು. ನಿರ್ದೇಶಕ ವಂ.ಸ್ವಾ.ಸ್ಟ್ಯಾನಿ.ಡಿ. ಅಲ್ಮೆಡಾ ಮಾತನಾಡಿ, ಒಡಿಪಿಯು ಉತ್ತಮ ಆಡಳಿತ ಹಾಗೂ ಚುನಾವಣೆಯ ಹಕ್ಕುಗಳ ಬಗ್ಗೆ ಅರಿವನ್ನು ಮೂಡಿಸುತ್ತಿದೆ ಹಾಗೂ ತಮ್ಮ ಸಿಬ್ಬಂದಿ ಯಾವುದೇ ಭೇದ ಭಾವವಿಲ್ಲದೆ ಉತ್ತಮ ಆಡಳಿತಗಾರರನ್ನು ಆಯ್ಕೆ ಮಾಡುವರು ಎಂದು ತಿಳಿಸಿದರು. ಒಡಿಪಿ ಕಾರ್ಯಕರ್ತರ ಮುಖಾಂತರ ಸುಮಾರು 40 ಸಾವಿರ ಜನರಿಗೆ ಮಾಹಿತಿ ನೀಡಬಹುದು ಎಂದು ಟಿಎಚ್ಪಿ ಕಾರ್ಯಕ್ರಮ ಸಂಯೋಜಕಿ ಯಮುನಾ ತಿಳಿಸಿದರು. ಮಹಿಳಾ ಸಬಲೀಕರಣ ಕಾರ್ಯಕ್ರಮ ಸಂಯೋಜಕಿ ಸುನಿತ ಇದ್ದರು.