ಚುನಾವಣೆ ಇದ್ರೂ ಪ್ರವಾಸಿಗರ ಕೊರತೆ ಇಲ್ಲ
ಜೆ. ಮಹದೇವ
ಮೈಸೂರು: ಪಿಂಚಣಿದಾರರ ಸ್ವರ್ಗ ಎಂದೇ ಖ್ಯಾತಿ ಗಳಿಸಿರುವ ಸಾಂಸ್ಕೃತಿಕ ನಗರಿಗೆ ಹರಿದು ಬರುವ ಪ್ರವಾಸಿಗರಿಗೇನು ಕೊರತೆ ಇಲ್ಲ. ಈಗಿನ ಪರಿಸ್ಥಿತಿ ಸ್ಪಲ್ಪ ಬಿಗಡಾಯಿಸಿದ್ದರೂ ಇಲ್ಲಿನ ವಾತಾವರಣ, ಸ್ಮಾರಕಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ.
ಒಂದು ಕಡೆ ವಿದ್ಯಾರ್ಥಿಗಳಿಗೆ ಪರೀಕ್ಷೆ. ಮತ್ತೊಂದು ಕಡೆ ತಮ್ಮ ಐದು ವರ್ಷದ ರಾಜಕೀಯ ಅಸ್ತಿತ್ವಕ್ಕಾಗಿ ಪರಿತಪಿಸುತ್ತಿರುವ ವಿವಿಧ ಪಕ್ಷದ ಅಭ್ಯರ್ಥಿಗಳು ಚುನಾವಣೆ ಮೂಲಕ ಅಗ್ನಿ ಪರೀಕ್ಷೆ ಎದುರಿಸುತ್ತಿದ್ದಾರೆ. ದೇಶದೆಲ್ಲೆಡೆ ಚುನಾವಣೆ ಕಾವು ಏರತೊಡಗಿದ್ದು, ನೀತಿ ಸಂಹಿತೆ ಸಂಬಂಧಪಟ್ಟವರಿಗೆ ಚುರುಕು ಮುಟ್ಟಿಸುತ್ತಿದೆ. ಕಡ್ಡಾಯ ಮತದಾನ ಮಾಡಬೇಕೆಂಬ ಚುನಾವಣೆ ಆಯೋಗದ ಜಾಗೃತಿಯ ನಡುವೆ ಮೈಸೂರಿಗೆ ಬಂದು ಹೋಗುವವರ ಸಂಖ್ಯೆಯಲ್ಲಿ ಇಳಿಮುಖವಾಗಿಲ್ಲ. ಆದರೆ, ಕಳೆದೆರಡು ವರ್ಷಕ್ಕೆ ಹೋಲಿಸಿದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆಯಷ್ಟೆ.
ಯದುವಂಶದವರು ಕಟ್ಟಿದ ಜಗದ್ವಿಖ್ಯಾತ ಮೈಸೂರು ಅರಮನೆಯ ಸೊಬಗು ಎಲ್ಲರನ್ನೂ ಆಕರ್ಷಿಸುತ್ತಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಮಾ. 1ರ ಶನಿವಾರದಂದು 9696, ಮಾ.2 ರಂದು 10122 ಮಂದಿ, ಮಾ.3 ರಂದು 4367 ಮಂದಿ ಭೇಟಿ ನೀಡಿದ್ದರು. ಮಾ.5 ರಿಂದ ಚುನಾವಣೆ ಘೋಷಣೆಯಾಯಿತು ಹಾಗೂ ಮಕ್ಕಳಿಗೆ ಪರೀಕ್ಷೆಯೂ ಆರಂಭವಾಯಿತು. ಅಲ್ಲಿಂದೀಚೆಗೂ ಸಹ ನಿರೀಕ್ಷೆಯಷ್ಟೇ ಜನರು ಭೇಟಿ ನೀಡಿ ಹೋಗಿದ್ದಾರೆ. ಮಾ. 6 ರಂದು 5413 ಮಂದಿ, ಮಾ. 7 ರಂದು 5081 ಮಂದಿ, ಮಾ. 8 ರಂದು 7821 ಮಂದಿ ಭೇಟಿ ನೀಡಿದ್ದಾರೆ.
ಕಳೆದೊಂದು ವಾರದಿಂದಲೂ ಈ ಸಂಖ್ಯೆಯಷ್ಟೇ ಜನರು ಬಂದಿದ್ದಾರೆ. ಮಾ.17 ರಂದು 9836 ಮಂದಿ, ಮಾ. 18 ರಂದು 4725, ಮಾ. 19 ರಂದು 4122, ಮಾ. 20 ರಂದು 3875, ಮಾ. 21 ರಂದು 4307, ಮಾ. 22 ರಂದು 7172, ಮಾ. 23 ರಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪುಣ್ಯಾರಾಧನೆ ಕಾರ್ಯಕ್ರಮದಿಂದ ಪ್ರವೇಶ ನಿಷೇಧವಾಗಿತ್ತು. ಮಾ.24 ರಂದು 4854, ಮಾ.25 ರಂದು 4018 ಮಂದಿ ಬಂದಿದ್ದಾರೆ. ಒಟ್ಟಿನಲ್ಲಿ ಮೈಸೂರು ಅರಮನೆಗೆ ಯಾವುದೇ ಅಡ್ಡಿ ಆತಂಕ ಇಲ್ಲದೆ ಜನರು ಭೇಟಿ ನೀಡುತ್ತಿದ್ದಾರೆ ಎಂದರೆ ಅದರ ಸೌಂದರ್ಯಕ್ಕೆ ಸಾಟಿಯೇ ಇಲ್ಲ ಎಂಬ ಸತ್ಯ ಗೊತ್ತಾಗುತ್ತದೆ.
ಮೃಗಾಲಯಕ್ಕೂ ತೊಂದರೆ ಇಲ್ಲ: ಮೈಸೂರಿಗೆ ಬಂದವರು ಮೃಗಾಲಯ ಮಿಸ್ ಮಾಡಿಕೊಳ್ಳದೇ ನೋಡಿ ಹೋಗುತ್ತಾರೆ. ಇಲ್ಲಿಯೂ ಮಾ.1 ರಂದು 7395 ಮಂದಿ, ಮಾ.2 ರಂದು 8950 ಮಂದಿ, ಮಾ. 3 ರಂದು 4380 ಮಂದಿ, ಮಾ.4 ರಂದು ರಜಾ ದಿನ, ಮಾ.5 ರಂದು 4707 ಮಂದಿ ಭೇಟಿ ನೀಡಿದ್ದರು. ಮಾ.5 ರಂದು ಚುನಾವಣೆ ಘೋಷಣೆಯಾಗಿ, ಮಕ್ಕಳಿಗೆ ಪರೀಕ್ಷೆ ಆರಂಭವಾದರು ಕೂಡ ಮಾ.6 ರಂದು 4169, ಮಾ.7 ರಂದು 3689, ಮಾ.8 ರಂದು 5525 ಮಂದಿ, ಮಾ.9 ರಂದು 9142 ಮಂದಿ ಭೇಟಿ ನೀಡಿದ್ದಾರೆ. ಇನ್ನು ಕಳೆದೊಂದು ವಾರದಲ್ಲಿ ಮಾ.17 ರಂದು 4330 ಮಂದಿ, ಮಾ.18 ರಂದು ರಜಾ ದಿನ, ಮಾ.19 ರಂದು 3495 ಮಂದಿ, ಮಾ.20 ರಂದು 2333, ಮಾ.21 ರಂದು 3026 ಮಂದಿ, ಮಾ.22 ರಂದು 5124 ಮಂದಿ, ಮಾ.23 ರಂದು 8865, ಮಾ.24 ರಂದು 3326 ಮಂದಿ ಭೇಟಿ ನೀಡಿದ್ದಾರೆ. ಒಟ್ಟಿನಲ್ಲಿ ಮೃಗಾಲಯದ ಅಧಿಕಾರಿಗಳು ಹೇಳುವ ಪ್ರಕಾರ ಡಿಸೆಂಬರ್ನಿಂದ ಜನವರಿ ಕೊನೆಯ ವಾರದ ತನಕವೂ ಪ್ರವಾಸಿಗರು ತುಂಬಿ ತುಳುಕುತ್ತಾರೆ. ಕಳೆದ ವರ್ಷದ ಏಪ್ರಿಲ್, ಮೇ ತಿಂಗಳು ಹಾಗೂ ಈ ವರ್ಷದ ಮಾರ್ಚ್, ಏಪ್ರಿಲ್, ಮೇ ನಲ್ಲಿ ನಮ್ಮ ನಿರೀಕ್ಷೆಗಿಂತ ಕಡಿಮೆ ಜನರು ಭೇಟಿ ನೀಡುತ್ತಾರೆ. ಈ ಎರಡೂ ವರ್ಷವೂ ಸಹ ಮೃಗಾಲಯಕ್ಕೆ ಹೊಡೆತ ಬಿದ್ದಿದೆ. ಉಳಿದಂತೆ ಆಚಿನ ವರ್ಷಗಳಲ್ಲಿ ಪ್ರವಾಸಿಗರ ಭೇಟಿ ದಾಖಲೆಯಾಗಿತ್ತು.