ಜಾತೀಯತೆ ಹೆಸರಲ್ಲಿ ಸಮಾಜ ಒಡೆದ ಕಾಂಗ್ರೆಸ್
ಕಿತ್ತೂರು: ಕಳೆದ 65 ವರ್ಷಗಳಿಂದ ದೇಶವಾಳಿದ ಕಾಂಗ್ರೆಸ್ ದೇಶಕ್ಕೆ ಯಾವ ಕೊಡುಗೆ ನೀಡದೆ ಹಿಂದುಳಿದ ವರ್ಗದವರ ಹೆಸರು ಹೇಳಿಕೊಂಡು, ಜಾತಿಯತೆ ಮೂಲಕ ಸಮಾಜ ಒಡೆದರೇ ವಿನಃ ಅಭಿವೃದ್ಧಿ ಮಾಡಲಿಲ್ಲ ಎಂದು ಮೈಸೂರು-ಕೊಡಗು ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಟೀಕಿಸಿದರು.
ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ಬಡ ಕುಟುಂಬದಿಂದಲೇ ಹುಟ್ಟಿ ಬೆಳೆದಿದ್ದು, ನನ್ನ ತಾಯಿ ಹಾಲು ಮಾರಿ ನೀಡಿದ ದುಡ್ಡಿನಿಂದ ಈ ಮಟ್ಟಕ್ಕೆ ಬೆಳೆದಿದ್ದು. ಬಡವರ ಕಷ್ಟಸುಖಗಳ ಬಗ್ಗೆ ನನಗೆ ಸ್ಪಷ್ಟ ಅರಿವಿದ್ದು, ಕ್ಷೇತ್ರದ ಮತದಾರರ ನಾಡಿಮಿಡಿತ ತಿಳಿದು ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದರು.
ನರೇಂದ್ರ ಮೋದಿ ಅವರ ದೂರದೃಷ್ಟಿಯ ಫಲವೇ ಇಂದು ಗುಜರಾತ್ ಪ್ರಪಂಚದಾದ್ಯಂತ ಹೆಸರು ಮಾಡಲು ಸಾಧ್ಯವಾಗಿದ್ದು, ಅಂತಹ ಅಭಿವೃದ್ಧಿ ರಾಜ್ಯ ಮತ್ತು ರಾಷ್ಟ್ರಕ್ಕೆ ಅತ್ಯವಶ್ಯವಾಗಿದೆ. ಇದು ಈಡೇರಬೇಕಾದರೆ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.
ರಾಷ್ಟ್ರೀಯ ಹಿತಾಸಕ್ತಿಗೆ ಒತ್ತು ನೀಡದೇ 10 ವರ್ಷಗಳ ಆಡಳಿತ ನೀಡಿದ ಕೇಂದ್ರದ ಯುಪಿಎ ಸರ್ಕಾರ ಭ್ರಷ್ಟಾಚಾರ, ಶತ್ರು ದೇಶಗಳ ಮೇಲಿನ ಮೃದು ಧೋರಣೆಯಿಂದ ದೇಶದ ಮಾನ ಕಳೆದು, ಜಾಗತಿಕ ಮಟ್ಟದಲ್ಲಿ ದೇಶ ತಲೆತಗ್ಗಿಸುವಂತೆ ಮಾಡಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪರಿಚಯ ನನಗೆ ಸಾಕಷ್ಟಿದ್ದು, ನಾನು ಕೂಡ ಈ ಕ್ಷೇತ್ರದ ಮಗನೆಂಬ ಭಾವನೆ ಇಲ್ಲಿನ ಯುವಕರ ಬೆಂಬಲದಿಂದ ನನಗೆ ಬಂದಿದೆ. ಹೋದ ಕಡೆಯಲ್ಲೆಲ್ಲ ಪಕ್ಷಕ್ಕೆ ಮತ್ತು ಪ್ರಧಾನಿ ಅಭ್ಯರ್ಥಿ ನರೇಂದ್ರಮೋದಿ ಅವರ ಬಗೆಗೆ ಸಾಮಾನ್ಯ ಜನರೂ ಮಾತನಾಡುತ್ತಿರುವುದರಿಂದ, ಈ ಬಾರಿ ಕೇಂದ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರ ಹಿಡಿಯುವುದು ನಿಶ್ಚಿತ ಎಂದು ಅವರು ಹೇಳಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಆರ್.ಟಿ. ಸತೀಶ್, ಹಿಂದುಳಿದ ವರ್ಗಗಳ ಅಧ್ಯಕ್ಷ ಎಂ.ಎಂ. ರಾಜೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಮೋದಪ್ಪ, ಶಕ್ತಿ ಕೇಂದ್ರದ ಅಧ್ಯಕ್ಷ ಸುಂದರ್, ಮೇಲೂರು ಮಂಜು, ವಡ್ಡರಹಳ್ಳಿ ದಶರಥ, ಡಿ.ಕೆ. ದೊಡ್ಡೇಗೌಡ, ಮಹದೇವ, ತಮ್ಮಯ್ಯಶೆಟ್ಟಿ ಇದ್ದರು.