ಟಿಕೆಟ್ ಸಿಗದ್ದರಿಂದ ಪಕ್ಷೇತರನಾಗಿ ಸ್ಪರ್ಧೆ: ಗುರುಮಲ್ಲೇಶ್
ಮೈಸೂರು: ಜೆಡಿಎಸ್ನಲ್ಲಿ ಹಲವು ವರ್ಷಗಳ ಕಾಲ ದುಡಿದ ನನಗೆ ಎಚ್.ಡಿ. ದೇವೇಗೌಡರು ಟಿಕೆಟ್ ಕೊಡಲು ನಿರ್ಧರಿಸಿದ್ದರು. ಆದರೆ, ಸ್ಥಳೀಯ ಮುಖಂಡರು ನನ್ನ ಹೆಸರು ಹೇಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಎಂದು ಗುರುಮಲ್ಲೇಶ್ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಕೆಟ್ ವಂಚಿತನಾದ ನನಗೆ ಆಂತರಿಕವಾಗಿ ಬೇಸರವಿದ್ದರೂ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೆ. ನಂತರ ನಡೆದ ಬೆಳವಣಿಗೆಗಳಿಂದ ಬೇಸತ್ತು ಜೆಡಿಎಸ್ಗೆ ರಾಜಿನಾಮೆ ನೀಡಿದೆ. ಆದರೂ ವರಿಷ್ಠರು ರಾಜಿನಾಮೆ ಅಂಗೀಕರಿಸಿಲ್ಲ. ಆದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ನಾನೊಂದು ದುಡಿಯುವ ಎತ್ತು. ದಯಮಾಡಿ ಈ ಕಾಡು ಮೃಗಗಳಿಂದ ಜನರು ನನ್ನನ್ನು ರಕ್ಷಿಸುತ್ತಾರೆ ನಂಬಿದ್ದೇನೆ ಎಂದರು. ಜೆಡಿಎಸ್ ಅಭ್ಯರ್ಥಿಯಾದ ಚಂದ್ರಶೇಖರಯ್ಯ ಅವರು ರಾಜಕಾರಣಕ್ಕೆ ಬರಬಾರದು. ಇಂದು ನ್ಯಾಯಾಂಗದ ಮೇಲೆ ಅಷ್ಟೋ ಇಷ್ಟೋ ಗೌರವ ಉಳಿದಿದೆ. ಇವರು ಬಂದು ಗೆದ್ದರೆ ಸಮಾಜದಲ್ಲಿ ನಡೆಯುವ ಭ್ರಷ್ಟಾಚಾರ, ಅಧಿಕಾರಿಗಳ ಲಂಚಗುಳಿತನವನ್ನು ನೋಡಿ ಸುಮ್ಮನಿರಬೇಕಾಗುತ್ತದೆ. ಅದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗಿ ನ್ಯಾಯಾಂಗ ವ್ಯವಸ್ಥೆ ಘನತೆ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಅವರು ನಾಮಪತ್ರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.