ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಕಲಿ ದಾಖಲೆ ಸೃಷ್ಟಿಸಿ ಒಡೆಯರ್ ಎಂಟು ಕೋಟಿ ಆಸ್ತಿ ಕಬಳಿಕೆ!

Rashmi Kasaragodu
Updated On : 29 Mar 2014, 2:33 am

ಮೈಸೂರು: ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕುಟುಂಬಕ್ಕೆ ಸೇರಿದ್ದ ಕೋಟ್ಯಂತರ ಮೌಲ್ಯದ ನಿವೇಶನವನ್ನು ನಕಲಿ ದಾಖಲೆ ಮೂಲಕ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಲೋಕಾಯುಕ್ತ ಸುಭಾಷ್ ಬಿ.ಅಡಿ ವಿಚಾರಣೆ ಆರಂಭಿಸಿದ್ದಾರೆ.
ನಗರದ ವಿದ್ಯಾರಣ್ಯಪುರಂ ನಿವಾಸಿ ಕುಂಜಪ್ಪ ಎಂಬವರ ಪುತ್ರ ಬಿ.ಕೆ.ಸುಂದರ್ (80) ನಕಲಿ ದಾಖಲೆ ಸೃಷ್ಟಿಸಿದ್ದವರು. ಒಡೆಯರ್ ವಂಶಸ್ಥರಿಗೆ ಸೇರಿದ 8.5 ಕೋಟಿ ಮೌಲ್ಯದ ನಿವೇಶನವನ್ನು ಕಬಳಿಸಿದ್ದ ಸುಂದರ್ ವಿರುದ್ಧ ವಕೀಲ ಸಿ. ಚಂದ್ರಶೇಖರ್ ಮಾ.15 ರಂದು ಉಪ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಈ ಕುರಿತು ಶುಕ್ರವಾರ ಬೆಳಗ್ಗೆ ನಗರಕ್ಕೆ ಆಗಮಿಸಿದ ಉಪ ಲೋಕಾಯುಕ್ತ ಸುಭಾಷ್ ಬಿ. ಅಡಿ ಅವರು, ಪೂರ್ವ ಉಪ ನೋಂದಣಿ ಕಚೇರಿಗೆ ಭೇಟಿ ನೀಡಿ ದಾಖಲೆ ಪರಿಶೀಲಿಸಿದರು. ಬಳಿಕ ಸರ್ಕಾರಿ ಅತಿಥಿಗೃಹದಲ್ಲಿ ಪೂರ್ವ ನೋಂದಣಿ ಕಚೇರಿಯ ನೋಂದಣಾಧಿಕಾರಿ ಗಿರೀಶ್ ಅವರನ್ನು ವಿಚಾರಣೆ ನಡೆಸಿದರು. ಈ ಸಂದರ್ಭದಲ್ಲಿ ಗಿರೀಶ್ 2013, ಡಿ.7ರಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಬಳಿಗೆ ತೆರಳಿ ಅವರ ಸಹಿ ಪಡೆದುದ್ದಲ್ಲದೆ, ಹೆಬ್ಬೆಟ್ಟು ಮುದ್ರೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ತಬ್ಬಿಬ್ಬಾದ ಅಧಿಕಾರಿ: ಈ ಮುನ್ನ ಉಪ ಲೋಕಾಯುಕ್ತರು ಒಡೆಯರ್ ಪತ್ನಿ ಪ್ರಮೋದಾದೇವಿ ಹಾಗೂ ಅರಮನೆ ಕಾರ್ಯದರ್ಶಿ ಲಕ್ಷ್ಮಿನಾರಾಯಣ್ ಅವರನ್ನು ಸಂಪರ್ಕಿಸಿ 2013, ಡಿ.7ರಂದು ಒಡೆಯರ್ ಮೈಸೂರಿನಲ್ಲಿ ಇರಲೇ ಇಲ್ಲ ಎಂಬ ಸಂಗತಿ ಖಚಿತಪಡಿಸಿಕೊಂಡಿದ್ದರು. ಈ ವಿಷಯವನ್ನು ಅಡಿ ಅವರು ಹೇಳುತ್ತಿದ್ದಂತೆ ತಬ್ಬಿಬ್ಬಾದ ಗಿರೀಶ್ ಉತ್ತರಿಸಲು ತಡವರಿಸಿದರು. ಮುಂದಿನ ವಿಚಾರಣೆಗೆ ವೇಳೆ ಸಂಬಂಧಿಸಿದ ಅಧಿಕಾರಿಗಳನ್ನು ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿದರು. ನೋಂದಣಿಯಾಗಿರುವ ಊರ್ಜಿತ ದಾಖಲೆಗಳು ನಕಲಿ ಎಂದು ಮೇಲ್ನೋಟಕ್ಕೆ ಕಂಡು ಬಂದಿವೆ. ಒಡೆಯರ್ ಅವರ ಸಹಿ ಹಾಗೂ ಹೆಬ್ಬೆಟ್ಟು ಗುರುತು ಕೂಡ ನಕಲಿ ಎಂಬ ಅನುಮಾನ ಇದೆ. ಆದ್ದರಿಂದ ವಿವರವಾದ ತನಿಖೆ ನಡೆಸುವುದಾಗಿ ಸುಭಾಷ್ ಬಿ ಆಡಿ ತಿಳಿಸಿದ್ದಾರೆ.
ಸುಂದರ್ ಯಾರು?: ನಕಲಿ ದಾಖಲೆ ಸೃಷ್ಟಿಸಿದ ವಿದ್ಯಾರಣ್ಯಪುರಂ ನಿವಾಸಿ ಬಿ.ಕೆ.ಸುಂದರ್ ಈ ಹಿಂದೆ ಅರಮನೆಯಲ್ಲಿ ನೌಕರರಾಗಿ ಸೇವೆ ಸಲ್ಲಿಸಿದ್ದ. ನಿವೃತ್ತಿ ನಂತರ ಅವರ ನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಮೆಚ್ಚಿ ಜಯಚಾಮರಾಜೇಂದ್ರ ಒಡೆಯರ್ ಈಗಿನ ಎಂ.ಜಿ. ರಸ್ತೆ ಬಳಿಯಲ್ಲಿ ಸರ್ವೆ ಸಂಖ್ಯೆ 4ರ ನಿವೇಶನ ಸಂಖ್ಯೆ 1ರಲ್ಲಿ 200್ಢ250 ಅಳತೆ ನಿವೇಶನವನ್ನು ದಾನವಾಗಿ ನೀಡಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಹಿಂದಿನ ಅರಸರ ಹೆಸರು ಜಯಚಾಮರಾಜ ಒಡೆಯರ್ ಎಂಬುದನ್ನು ಅರಿಯದ ಅವರು, ನಕಲಿ ದಾಖಲಾತಿ ಸೃಷ್ಟಿಸುವ ಭರದಲ್ಲಿ ಹೆಸರನ್ನು ಸಹ ತಪ್ಪಾಗಿ ಮುದ್ರಿಸಿದ್ದಾರೆ.
ನಂತರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನರಾಗುವ ಮೂರು ದಿನ ಮುನ್ನ ಅಂದರೆ 2013, ಡಿ.7ರಂದು ಸಂಜೆ 5.45ರಿಂದ 6.40ರ ಅವಧಿಯಲ್ಲಿ ದಾನಪತ್ರದ ಊರ್ಜಿತ ದಾಖಲೆಗೆ ಅರ್ಜಿದಾರರ ಕೋರಿಕೆ ಮೇರೆಗೆ ಮೈಸೂರಿನ ರೇಸ್ ಕ್ಲಬ್ ಬಳಿ ಒಡೆಯರ್ ಅವರ ಸಹಿ, ಭಾವಚಿತ್ರ ಹಾಗೂ ಹೆಬ್ಬೆಟ್ಟು ಮುದ್ರೆ ಪಡೆಯಲಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಲಾಗಿದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಎಂದರೆ 2013ರ ದಸರಾ ಮುಗಿಸಿ ಬೆಂಗಳೂರಿಗೆ ತೆರಳಿದ ಒಡೆಯರ್ ಮತ್ತೆ ಜೀವಂತವಾಗಿ ಮೈಸೂರಿಗೆ ಬರಲೇ ಇಲ್ಲ. ಚಾಮುಂಡಿಬೆಟ್ಟದ ತಪ್ಪಲಿನ ಸುತ್ತಲ ಹಾಗೂ ಕುರುಬಾರಹಳ್ಳಿ ಸರ್ವೆ ಸಂಖ್ಯೆ 4ಕ್ಕೆ ಸಂಬಂಧಿಸಿದಂತೆ ಯಾವುದೇ ನೋಂದಣಿ ಅಥವಾ ಖಾತೆ ಮಾಡಬಾರದೆಂಬ ಸರ್ಕಾರದ ಆದೇಶವಿದ್ದರೂ ನೋಂದಣಾಧಿಕಾರಿ ಗಿರೀಶ್ ಅವರು ಊರ್ಜಿತ ದಾಖಲೆಯನ್ನು ನೋಂದಣಿ ಮಾಡಿದ್ದಾರೆ ಹಾಗೂ ಈ ಆಸ್ತಿಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯಲ್ಲಿ ಖಾತೆ ಮಾಡಿಕೊಟ್ಟಿದ್ದಾರೆ. ವಿಚಾರಣೆ ವೇಳೆ ಜಿಲ್ಲಾ ನೋಂದಣಾಧಿಕಾರಿ ಹಂಸವೇಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement