ಮಹಿಳೆಯರನ್ನು ಮುಖ್ಯವಾಹಿನಿಗೆ ತನ್ನಿ
ಕ.ಪ್ರ.ವಾರ್ತೆ ಮೈಸೂರು ಮಾ. 28
ಬುಡಕಟ್ಟು ಮಹಿಳೆಯರನ್ನು ಮಾನವರಾಗಿ ನೋಡುವ ದೃಷ್ಟಿಕೋನ ಬೆಳೆಸಿಕೊಂಡು, ಅವರನ್ನು ಮುಖ್ಯವಾಹಿನಿಗೆ ತರಬೇಕು ಎಂದು ಮಧ್ಯಪ್ರದೇಶದ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ವಿ. ಕಟ್ಟಿಮನಿ ಹೇಳಿದರು.
ಭಾರತೀಯ ಭಾಷಾ ಸಂಸ್ಥಾನದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಗಿರಿಜನ ಸಂಶೋಧನಾ ಸಂಸ್ಥೆ ಆಯೋಜಿಸಿರುವ ಭಾರತದಲ್ಲಿ ಬುಡಕಟ್ಟು ಮಹಿಳೆಯರ ಸಬಲೀಕರಣ- ವಿಶೇಷವಾಗಿ ಕರ್ನಾಟಕದಲ್ಲಿ ಕುರಿತ ಎರಡು ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಬುಡಕಟ್ಟು ಮಹಿಳೆಯರನ್ನು ಮನುಷ್ಯರಾಗಿ ನೋಡಬೇಕು. ಬಳಿಕ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಪ್ರಾಮಾಣಿಕವಾಗಿ ನಡೆಯಬೇಕು. ಬುಡಕಟ್ಟು ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಈ ನಿಟ್ಟಿನಲ್ಲಿ ಸುಶಿಕ್ಷಿತರು ಹೆಚ್ಚು ಮಂದಿ ಸಂಶೋಧನೆಗೆ ಮುಂದಾಗುತ್ತಿಲ್ಲ. ಬುಡಕಟ್ಟು ಮಹಿಳೆಯರ ಸ್ಥಿತಿಗತಿ ಬಗ್ಗೆ ಹೆಚ್ಚು ಸಂಶೋಧನೆ ನಡೆಸಿ ಇಂಗ್ಲಿಷ್ನಲ್ಲಿ ಪ್ರಬಂಧಗಳನ್ನು ಮಂಡಿಸಬೇಕು. ಆಗ ಭಾರತದ ಎಲ್ಲಾ ಸಂಶೋಧಕರಿಗೂ ಸಹಾಯವಾಗುತ್ತದೆ. ರಾಜ್ಯ ಗಿರಿಜನ ಸಂಶೋಧನಾ ಸಂಸ್ಥೆಯು ಮೈಸೂರಿನಲ್ಲಿ ತೆರೆಯಲು ಉದ್ದೇಶಿಸಿರುವ ಬುಡಕಟ್ಟು ವಸ್ತು ಸಂಗ್ರಹಾಲಯದಲ್ಲಿ ಮೊದಲು ಸೂಕ್ತ ಗ್ರಂಥಾಲಯ ತೆರೆಯಬೇಕು. ಅಲ್ಲದೆ ಸರ್ಕಾರದ ಅನುದಾನದ ಜೊತೆಗೆ ದೊಡ್ಡ ದೊಡ್ಡ ಉದ್ಯಮಿಗಳ ಸಂಪರ್ಕ ಸಾಧಿಸಿ, ಅವರ ಮೂಲಕ ಗಿರಿಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಆಗುವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಅಭಿವೃದ್ಧಿ ಶೂನ್ಯ: ಮುಖ್ಯ ಭಾಷಣ ಮಾಡಿದ ಕರ್ನಾಟಕ ವಿವಿ ಮಾನವಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಸಿ.ಜಿ. ಹುಸೇನ್ಖಾನ್, ಭಾರತ ತಂತ್ರಜ್ಞಾನ, ವಿಜ್ಞಾನ, ಬಹು ಶ್ರೀಮಂತರು ಹೊಂದಿದ 10ರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಆದರೆ ಹಳ್ಳಿಗಾಡಿನ, ಅದರಲ್ಲೂ ಮುಖ್ಯವಾಗಿ ಬುಡಕಟ್ಟು ಸಮುದಾಯದ ಅಭಿವೃದ್ಧಿ ಶೂನ್ಯವಾಗಿದೆ. ಪ್ರತಿ ಐದು ನಿಮಿಷಕ್ಕೆ ಒಬ್ಬ ಗರ್ಭಿಣಿ ಮೃತಪಟ್ಟರೆ, ಲಿಂಗಾನುಪಾತದಲ್ಲಿ ಏರಿಳಿತ ಆಗದೆ ಇರದು. ಅಲ್ಲದೆ ಹೆಚ್ಚಾಗಿ ವಿದ್ಯಾವಂತ ಕುಟುಂಬದವರೆ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.
ಮಕ್ಕಳಲ್ಲಿ ಅಪೌಷ್ಟಿಕತೆ ಕಂಡುಬರುತ್ತಿದೆ. ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸೂಕ್ತ ಶಿಕ್ಷಣ ಸೌಲಭ್ಯ ದೊರಕುತ್ತಿಲ್ಲ. ಅಲ್ಲದೆ ಪೌಷ್ಟಿಕ ಆಹಾರ ದೊರಕುವುದು ಕಷ್ಟದ ವಿಷಯ. ಬುಡಕಟ್ಟು ಕುಟುಂಬಗಳಲ್ಲಿ ಗಂಡ- ಹೆಂಡತಿಯರಿಬ್ಬರೂ ದುಡಿದರೂ ಕಡೆಗೆ ಕುಟುಂಬದ ಸಂಪೂರ್ಣ ಆರ್ಥಿಕ ಹಿಡಿತ ಗಂಡನ ಕೈಯಲ್ಲಿರುತ್ತದೆ. ಭೂ ಒಡೆತನ ಕಾಯ್ದೆಯಲ್ಲಿನ ಬದಲಾವಣೆಯೂ ಬುಡಕಟ್ಟು ಮಹಿಳೆಯರಿಗೆ ತೊಂದರೆ ಆಗಿಯೆ ಪರಿಣಮಿಸಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಇ.ವೆಂಕಟಯ್ಯ, ಗಿರಿಜನ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಟಿ.ಟಿ. ಬಸವನಗೌಡ, ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕ ಡಾ.ಕೆ.ಎನ್. ವಿಜಯಪ್ರಕಾಶ್, ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್. ಮೃತ್ಯುಂಜಯ ಇದ್ದರು.