ಸಿದ್ದರಾಮಯ್ಯ ಕೈ ಬಲಪಡಿಸಿ
ಮೈಸೂರು: ಮೈಸೂರು ಜಿಲ್ಲೆಗೆ ಸೇರಿದ ಒಬ್ಬ ಹೆಮ್ಮೆಯ ರಾಜಕಾರಣಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಬಲಪಡಿಸುವ ಸಲುವಾಗಿ ನಾಗರಿಕರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಕೆ. ಮಹದೇವ್ ಮನವಿ ಮಾಡಿದರು.
ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಗೆ ಸೇರಿದವರು ಎಂಬುದೆ ಹೆಮ್ಮೆಯ ವಿಷಯವಾಗಿದ್ದು, ಯಾವ ಜಾತಿಗೆ ಸೇರಿದವರು ಎಂಬುದನ್ನು ಗಣನೆಗೆ ತೆಗದುಕೊಳ್ಳಬಾರದು. ಸಾಮಾನ್ಯ ಕುಟುಂಬದಿಂದ ಬಂದ ಅವರು ವಾಮಮಾರ್ಗ ಹಿಡಿದು ಸಿಎಂ ಆದವರಲ್ಲ. ಸಜ್ಜನಿಕೆಯ ರಾಜಕೀಯ ಹೋರಾಟ ರೂಢಿಸಿಕೊಂಡಿದ್ದಾರೆ. ನಾವು ಬೆಂಗಳೂರಿಗೆ ಕೆಲಸಕ್ಕೆ ಹೋದರೆ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ ನೀವು ಮೈಸೂರಿನವರೆ ಎಂದು ಕೇಳಿ ಕೂರಿಸಿ ಮಾತನಾಡಿಸುತ್ತಾರೆ. ಇದಕ್ಕೆ ಕಾರಣ ಸಿದ್ದರಾಮಯ್ಯನವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಕೂಡಲೇ ಜನಪ್ರಿಯ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದರು. ಅವರನ್ನು 5 ವರ್ಷಗಳ ಕಾಲ ಮುಖ್ಯಮಂತ್ರಿ ಪಟ್ಟದಲ್ಲಿ ಉಳಿಸಿಕೊಳ್ಳಬೇಕು. ಅದಕ್ಕಾಗಿ ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಎಚ್.ವಿಶ್ವನಾಥ್, ಆರ್. ಧ್ರುವನಾರಾಯಣ್ ಅವರಿಗೆ ಮತ ನೀಡಬೇಕು ಎಂದು ಕೋರಿದರು.