ಔಟ್ರೀಚ್, ಆನ್ಲೈನ್ ಸೇವೆ ಆರಂಭ, ಪಿಎಚ್.ಡಿ ನಿಯಮ ಪರಿಷ್ಕರಣೆ ಇಲ್ಲ
ಮೈಸೂರು: ಆರ್ಥಿಕ ಸಂಕಷ್ಟದಿಂದ ಹೊರಬರುವ ಒಂದು ಭಾಗವಾಗಿ ದೂರ ಶಿಕ್ಷಣವನ್ನು ಮತ್ತೆ ಆರಂಭಿಸಲು ಮೈಸೂರು ವಿವಿ ಮುಂದಾಗಿದೆ. ಅದರ ಒಂದು ಭಾಗವಾಗಿ ಈ ಶೈಕ್ಷಣಿಕ ವರ್ಷದಿಂದಲೇ ಔಟ್ರೀಚ್ ಹಾಗೂ ಆನ್ಲೈನ್ ಕಾರ್ಯಕ್ರಮ ಆರಂಭವಾಗಲಿವೆ. ಕುಲಪತಿ ರಂಗಪ್ಪ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಮೈಸೂರು ವಿವಿ ಶಿಕ್ಷಣ ಮಂಡಳಿಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಆನ್ಲೈನ್ ಮತ್ತು ಔಟ್ರೀಚ್ ಕೋರ್ಸ್ಗಳು ವಿವಿಗೆ ಸೈಡ್ ಬಿಜಿನೆಸ್ ಇದ್ದಂತೆ. ಮೇನ್ ಬಿಜಿನೆಸ್ ಅಲ್ಲ. ಆದರೆ ಶುಲ್ಕ ಹೆಚ್ಚು ಬರುವುದರಿಂದ ವಿವಿಯ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ದದೆ ಎಂದು ರಂಗಪ್ಪ ತಿಳಿಸಿದರು. ಔಟ್ರೀಚ್ ಕಾರ್ಯಕ್ರಮಗಳಿಗೆ ಶಾಶ್ವತ ಸಂಯೋಜನೆ ನೀಡುವ ಬಗ್ಗೆ ಪರಿಶೀಲಿಸುವಂತೆ ಕಾಲೇಜು ಅಭಿವೃದ್ಧಿ ಮಂಡಲಿ ನಿರ್ದೇಶಕ ಲಿಂಗರಾಜ ಗಾಂಧಿ ಸಲಹೆ ಮಾಡಿದರು.
ತಿರಸ್ಕಾರ: ಕನ್ನಡ, ಉರ್ದು ಹಾಗೂ ಸಂಸ್ಕೃತಿ ವಿಷಯಗಳಲ್ಲಿ ಪಿಎಚ್.ಡಿ ಮಾಡಲು ವಿದೇಶಿ ವಿದ್ಯಾರ್ಥಿಗಳು ಮುಂದೆ ಬರುತ್ತಿಲ್ಲ. ಹೀಗಾಗಿ 2 ಸೀಟುಗಳು ನಷ್ಟವಾಗುತ್ತಿವೆ. ಹೀಗಾಗಿ ರೋಸ್ಟರ್ ಸಮೇತ ಇರುವ 6 ಸೀಟುಗಳ ಜೊತೆಗೆ ಈ ಎರಡು ಸೀಟು ಸೇರಿಸಿ, ಪ್ರವೇಶ ನೀಡಬೇಕು ಎಂದು ಪಿಎಚ್.ಡಿ ನಿಯಮಾವಳಿಗೆ ತಿದ್ದುಪಡಿ ಮಾಡುವ ವಿಷಯ ಸಭೆ ಮುಂದೆ ಬಂದಿತು. ಈ ಬಗ್ಗೆ ಚರ್ಚೆ ನಡೆಯಿತು. ಈ ಮೂರು ವಿಭಾಗಗಳಲ್ಲಿ ಪರಿಷ್ಕರಿಸಿದರೆ ಇತರೆ ವಿಭಾಗಗಳಲ್ಲೂ ಮಾಡಬೇಕಾಗುತ್ತದೆ.ಒಂದು ವೇಳೆ ಪ್ರವೇಶ ನೀಡಿದ ನಂತರ ವಿದೇಶಿ ವಿದ್ಯಾರ್ಥಿಗಳು ಬಂದಲ್ಲಿ ಅನ್ಯಾಯವಾಗುತ್ತದೆ ಎಂಬ ಕಾರಣಕ್ಕಾಗಿ ಈ ವಿಷಯವನ್ನು ಸರ್ವಾನುಮತದಿಂದ ತಿರಸ್ಕರಿಸಲಾಯಿತು. ಕುಲಸಚಿವ ಪ್ರೊ.ಸಿ. ಬಸವರಾಜು, ಪ್ರೊ.ಎಸ್. ಇಂದುವತಿ, ಪ್ರೊ. ಲಿಂಗರಾಜ ಗಾಂಧಿ, ಪ್ರೊ.ರವಿ, ಪ್ರೊ. ನಾಗಭೂಷಣ್, ಪ್ರೊ. ನಾಯಕ್, ಪ್ರೊ.ಮಹದೇವ್, ವಿ.ಎ. ದೇಶಪಾಂಡೆ ಮತ್ತಿತರರು ಪಾಲ್ಗೊಂಡಿದ್ದರು.