ಪ್ರಿಕ್ಯಾಂಬ್ರಿಯನ್ ಜಿಯಾಲಜಿ ಕಲಿಕಾ ಕೇಂದ್ರ ಲೋಕಾರ್ಪಣೆ
ಮೈಸೂರು: ಇತ್ತೀಚಿನ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುವ ವಿಚಾರಗಳೆಲ್ಲವೂ ಹೊಸದಾಗಿಯೇ ಇರುತ್ತವೆ. ಅದರಂತೆ ನಾವು ಸಹ ಪ್ರತಿದಿನ ಹೊಸ ವಿಚಾರಗಳ ಅನ್ವೇಷಣೆಗೆ ತೊಡಗಬೇಕಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅಭಿಪ್ರಾಯಪಟ್ಟರು. ಶನಿವಾರ ಮಾನಸಗಂಗೋತ್ರಿಯ ಭೂ ವಿಜ್ಞಾನ ಅಧ್ಯಯನ ವಿಭಾಗದಲ್ಲಿ ಪ್ರಿಕ್ಯಾಂಬ್ರಿಯನ್ ಜಿಯಾಲಜಿ ಅತ್ಯುನ್ನತ ಕಲಿಕಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಹೊಸತನದ ಆಲೋಚನೆಯಿಂದಾಗಿಯೇ ಚೀನಾ ನಮಗಿಂತ 25 ವರ್ಷಗಳಷ್ಟು ಮುಂದಿದೆ. ಅಲ್ಲಿನವರಲ್ಲಿರುವ ಶಿಸ್ತು, ಸತತ ಪರಿಶ್ರಮವೇ ಕಾರಣ. ಭಾರತ ತನ್ನದೇ ಆದ ಬ್ರ್ಯಾಂಡ್ ಹಾಗೂ ಸಂಸ್ಕೃತಿ ಹೊಂದಿದ್ದರೂ ಸಹ ಅಭಿವೃದ್ಧಿ ಸಾಧಿಸುವಲ್ಲಿ ಹಿಂದೆ ಬಿದ್ದಿದೆ ಎಂದು ವಿಷಾದಿಸಿದರು. ಕುಲಸಚಿವ ಪ್ರೊ. ಸಿ. ಬಸವರಾಜು ಮಾತನಾಡಿ, ವೈಜ್ಞಾನಿಕ ಪದ್ಧತಿ ಅನುಸರಿಸದೆ ನಾವು ಪರಿಸರ ಮಾಲಿನ್ಯಕ್ಕೆ ಕಾರಣರಾಗುತ್ತಿದ್ದೇವೆ ಎಂದರು. ಪ್ರೊ. ಎಸ್. ಗೋವಿಂದಯ್ಯ, ಯುಜಿಸಿ- ಸಿಎಎಸ್-1 ಸಂಯೋಜನಾಧಿಕಾರಿ ಪ್ರೊ.ಎಚ್.ಟಿ. ಬಸವರಾಜಪ್ಪ, ಉಪ ಸಂಯೋಜನಾಧಿಕಾರಿ ಬಿ. ಬಸವಲಿಂಗಯ್ಯ ಸೇರಿದಂತೆ ಮತ್ತಿತರರು ಇದ್ದರು.