ನೀರಿಗೆ ಆಗ್ರಹಿಸಿ ಕಾಡಾ ಕಚೇರಿ ಮುತ್ತಿಗೆ
ಮೈಸೂರು: ಕಬಿನಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲು ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದವರು ಕಾಡಾ ಕಚೇರಿಗೆ ಶನಿವಾರ ಮುತ್ತಿಗೆ ಹಾಕಿದ್ದು, ಸಂಜೆಯ ನಂತರವು ತಮ್ಮ ಹೋರಾಟ ಮುಂದುವರೆಸಿದ್ದಾರೆ.
ಕಬಿನಿ ಜಲಾಶಯದಲ್ಲಿ ನೀರು ಇದೆ. ನದಿಗೆ ನೀರು ಬಿಡುತ್ತಿರುವ ನೀರಾವರಿ ಇಲಾಖೆ ಅಧಿಕಾರಿಗಳು ಕಾಲುವೆಗಳಿಗೆ ನೀರು ಹರಿಸುತ್ತಿಲ್ಲ. ಕಳೆದ 2 ತಿಂಗಳಿಂದ ಕಾಲುವೆಗಳಿಗೆ ನೀರು ಬಿಡುವಂತೆ ಮನವಿ ಸಲ್ಲಿಸಿದ್ದೇವೆ. 2- 3 ಬಾರಿ ನೀರು ಬಿಡುವುದಾಗಿ ಹೇಳಿದ ಅಧಿಕಾರಿಗಳು ನಂತರ ಮಾತು ತಪ್ಪಿಸಿದ್ದಾರೆ.
ಇದರಿಂದ ಆಕ್ರೋಶಗೊಂಡ ರೈತರು, ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್ ಶಿವಶಂಕರ್, ಅಧೀಕ್ಷಕ ಎಂಜಿನಿಯರ್ ಶಿವಮೂರ್ತಿ ಕಚೇರಿಗೆ ಮುತ್ತಿಗೆ ಹಾಕಿದ್ದು, ಸಂಜೆಯ ನಂತರವು ಪ್ರತಿಭಟನೆ ಮುಂದುವರೆಸಿದ್ದಾರೆ.
ಎಂಜಿನಿಯರ್ಗೆ ದಿಗ್ಬಂಧನ: ಮುಖ್ಯ ಎಂಜಿನಿಯರ್ ಶಿವಶಂಕರ್ ಅವರನ್ನು ಕಚೇರಿಯೊಳಗೆ ರೈತರು ದಿಗ್ಭಂಧನ ಹಾಕಿದ್ದಾರೆ.ನೀರು ಬಿಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಸಿದ್ದಾರೆ.
ಮುಖಂಡರಾದ ಅತ್ತಹಳ್ಳಿ ದೇವರಾಜ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕಿರಗೊಂಸೂರು ಶಂಕರ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.