ಪ. ನಾಗರಾಜಯ್ಯಗೆ ಶ್ರದ್ಧಾಂಜಲಿ
ಎಚ್.ಡಿ. ಕೋಟೆ: ಹಿರಿಯ ಸಾಹಿತಿ ಪಂಡಿತ ಪ. ನಾಗರಾಜಯ್ಯ ನಿಧನದಿಂದ ತಾಲೂಕಿಗೆ ಮತ್ತು ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಾಹಿತಿ ಎಂ.ಎನ್. ರವಿಶಂಕರ್ ಹೇಳಿದರು.
ಪಟ್ಟಣದ ಬಾಪೂಜಿ ವೃತ್ತದ ಬಳಿ ಕಸಾಪ, ಕಸ್ತೂರಿ ಜನನಿ ಸಂಸ್ಥೆ, ಲಯನ್ಸ್ ಕ್ಲಬ್ ಮತ್ತು ಇತರೆ ಕನ್ನಡ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಪಂಪನ ಆದಿಪುರಾಣ ದೀಪಿಕೆ, ರನ್ನನ ಅಜಿತನಾಥ ಪುರಾಣ ಸೇರಿದಂತೆ ನೂರಕ್ಕೂ ಹೆಚ್ಚು ಕೃತಿಗಳು ಮತ್ತು ಸಾವಿರಾರು ಲೇಖನಗಳನ್ನು ಬರೆದಿದ್ದರು. 30 ವರ್ಷಕ್ಕೂ ಹೆಚ್ಚು ಕಾಲ ಹಾಸನ ಮತ್ತು ಮೈಸೂರಿನ ಜಿಲ್ಲಾ ಕಸಾಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು ಎಂದು ಸ್ಮರಿಸಿದರು.
ಕಸಾಪ ಗೌರವ ಕಾರ್ಯದರ್ಶಿ ಕನ್ನಡ ಪ್ರಮೋದ್ ಮಾತನಾಡಿ, ನಾಗರಾಜಯ್ಯ ನಮ್ಮ ತಾಲ್ಲೂಕಿನವರೇ ಆದರೂ ಅವರ ಬಗ್ಗೆ ಹೆಚ್ಚು ತಿಳಿದುಕೊಂಡಿರಲಿಲ್ಲ. ಆದರೆ ಕಳೆದ ಜೂನ್ ತಿಂಗಳಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಮಾಡಿದ್ದರಿಂದ ನಮಗೆ ತೃಪ್ತಿ ಸಿಕ್ಕಿತು. ಹಾಗೇ ಸಮ್ಮೇಳನದಲ್ಲಿ ಉತ್ಸಾಹದಿಂದ ದಿನಪೂರ್ತಿ ಭಾಗವಹಿಸಿ ಯುವಕರಿಗೆ ಸ್ಫೂರ್ತಿಯಾಗಿದ್ದರು ಎಂದರು.
ತಾಲೂಕು ಕಸಾಪ ಅಧ್ಯಕ್ಷ ಡಿ.ಆರ್. ಮಹೇಶ್, ಕಸ್ತೂರಿ ಜನನಿ ಸಂಸ್ಥೆ ಅಧ್ಯಕ್ಷ ಕುಮಾರಸ್ವಾಮಿ, ಸತೀಶ್ ಬಿ. ಆರಾಧ್ಯ, ಪತ್ರಕರ್ತರ ಸಂಘದ ಅಧ್ಯಕ್ಷ ಮಂಜುಕೋಟೆ, ಕನ್ನಡಸೇನೆ ಅಧ್ಯಕ್ಷ ಕುಮಾರ್, ಛಾಯಾಗ್ರಾಹಕರ ಸಂಘದ ಅಧ್ಯಕ್ಷ ನಂದಕುಮಾರ್, ಸೋಮು, ಚಾ. ನಂಜುಂಡಮೂರ್ತಿ ಇದ್ದರು.