ಲಕ್ಕಪಟ್ಟಣ ಕಾಡಿಗೆ ಬೆಂಕಿ
ಹುಣಸೂರು: ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗಕ್ಕೆ ಸೇರಿದ ಶೆಟ್ಟಳ್ಳಿ- ಲಕ್ಕಪಟ್ಟಣದ ಕಾಡಿಗೆ ಬೆಂಕಿ ಬಿದ್ದು ನೂರು ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಹಾಗೂ ಪಕ್ಕದ ಕಚುವಿನಹಳ್ಳಿಯ ತರಗನ್ ತೆಂಗಿನ ಎಸ್ಟೇಟಿಗೂ ಬೆಂಕಿ ಹರಡಿ 50ಕ್ಕೂ ಹೆಚ್ಚು ತೆಂಗಿನ ಮರಗಳು ಭಾನುವಾರ ಮಧ್ಯಾಹ್ನ ಬೆಂಕಿಗಾಹುತಿಯಾಗಿವೆ.
ತಾಲೂಕಿನ ಹನಗೋಡು ಸಮೀಪದ ಶೆಟ್ಟಳ್ಳಿ- ಲಕ್ಕಪಟ್ಟಣ ಗಿರಿಜನ ಪುನರ್ವಸತಿ ಪ್ರದೇಶದ ರಸ್ತೆಯಾಚೆಗಿನ ಮತ್ತೊಂದು ಬದಿಯಲ್ಲಿರುವ 500 ಎಕರೆ ಪ್ರದೇಶದ ನೇಗತ್ತೂರು ಕಲ್ಲು ಮಂಟಿಯಲ್ಲಿ ಕಾಣಿಸಿಕೊಂಡ ಬೆಂಕಿಯು, ಪಕ್ಕದ ತರಗನ್ ಎಸ್ಟೇಟಿನ ತೆಂಗಿನ ಮರಗಳಿಗೂ ಹಬ್ಬಿತು. ಬಿಸಿಲಿನ ಬೇಗೆ ಮತ್ತು ಗಾಳಿಗೆ ಬೆಂಕಿಯು ಕೆಲವೇ ಗಂಟೆಗಳಲ್ಲಿ ನೂರಕ್ಕೂ ಹೆಚ್ಚು ಎಕರೆ ಪ್ರದೇಶಗಳಲ್ಲಿದ್ದ ಗಿಡ- ಮರಗಳು ಬೆಂಕಿಗೆ ಬಲಿಯಾಗಿದೆ. ಅರಣ್ಯ ಇಲಾಖೆಗೆ ಸಾರ್ವಜನಿಕರೇ ಮಾಹಿತಿ ನೀಡಿದ್ದರೂ ತಕ್ಷಣ ಬಾರದ್ದರಿಂದ ಬೆಂಕಿ ಎಲ್ಲೆಡೆ ವ್ಯಾಪಿಸಿ ಹೆಚ್ಚಿನ ಕಾಡು ನಾಶಕ್ಕೆ ಕಾರಣವಾಯಿತು. ತಡವಾಗಿ ಬಂದ ಕೆಲವೇ ಅರಣ್ಯ ಸಿಬ್ಬಂದಿ ನೇಗತ್ತೂರು ಗ್ರಾಮಸ್ಥರ ಸಹಕಾರದಿಂದ ಸಂಜೆ ವೇಳೆಗೆ ಬೆಂಕಿ ನಂದಿಸಿದರೂ ಹೊಗೆ ನೀತಿರಲಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಫ್ ವಿಜಯಕುಮಾರ್, ನಮಗೆ ಮಾಹಿತಿ ಇರಲಿಲ್ಲ. ವಿಷಯ ತಿಳಿದ ತಕ್ಷಣ ಸಿಬ್ಬಂದಿ ಕಳುಹಿಸಲಾಗಿದೆ. ಗ್ರಾಮಸ್ಥರ ಸಹಕಾರದಿಂದ ಬೆಂಕಿ ತಹಬದಿಗೆ ಬಂದಿದೆ ಎಂದು ತಿಳಿಸಿದರು.
ರೈತರಿಗೆ ಸಲಹೆ
ಮೈಸೂರು: ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರಾಧೀಕ್ಷಕ ಡಾ.ಸಿ. ಗೋವಿಂದರಾಜು, ಸಹ ಸಂಶೋಧಕ ಎನ್. ನರೇಂದ್ರಬಾಬು ಸಲಹೆ ನೀಡಿದ್ದಾರೆ. ತರಕಾರಿ ಬೆಳೆಗಳು ಹೂವಿ ಬಿಡುವ ಹಂತದಲ್ಲಿ ರಸ ಹೀರುವ ಕೀಟಗಳು ದಾಳಿ ಮಾಡಿದ್ದಲ್ಲಿ ಅವುಗಳ ನಿಯಂತ್ರಣಕ್ಕೆ 2.5 ಮಿ.ಲೀ. ಕ್ಲೋರೋಫೈರಿಫಾಸ್ ಬೆರೆಸಿ ಸಿಂಪಡಿಸುವುದು. ಸಪೋಟ ಹಾಗೂ ಸೀಬೆ ಗಿಡಕ್ಕೆ ಕಪ್ಪು ಶೀಲಿಂದ್ರ ಬಾಧಿಸಿದ್ದಲ್ಲಿ 20 ಗ್ರಾಂ ಕಾರ್ನ್‌ಪ್ಲೊರ್ ಹಿಟ್ಟನ್ನು 1 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸುವುದು.