ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾರಮೇಕರ ನೆನಪು ಎಲ್ಲೆಡೆ

Mainashree
Updated On : 2 May 2014, 12:06 pm

ಕ.ಪ್ರ.ವಾರ್ತೆ  ಮೈಸೂರು  ಮೇ 1
ಸಾವಿರಾರು ಕಾರ್ಮಿಕರಿಗೆ ಜೀವನ ನೀಡುತ್ತಿರುವ ಕಾರ್ಖಾನೆಗಳನ್ನು ನುಂಗಿ ಹಾಕಲು ರಿಯಲ್ ಎಸ್ಟೇಟ್ ಉದ್ಯಮ ಕಾದು ಕುಳಿತಿದೆ. ಇದರ ವಿರುದ್ಧ ಕಾರ್ಮಿಕರೆಲ್ಲರೂ ಸಂಘಟಿತ ಹೋರಾಟ ನಡೆಸಬೇಕು ಎಂದು ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಎಚ್.ಆರ್. ಶೇಷಾದ್ರಿ ಕರೆ ನೀಡಿದರು.
ಮೈಸೂರು ಪಾಲಿಮರ್ಸ್ ಆ್ಯಂಡ್ ರಬ್ಬರ್ ಪ್ರೊಡಕ್ಟ್ ಲಿಮಿಟೆಡ್ (ಮೈಪಾಲ್) ಕಾರ್ಖಾನೆಯು ನಗರದ ಜಗನ್ಮೋಹನ ಅರಮನೆಯಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಈಗಿನ ರಾಜಕೀಯ ವ್ಯವಸ್ಥೆ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಉತ್ತೇಜನ ನೀಡುತ್ತಿದೆ. ಕೈಗಾರಿಕಾ ಪ್ರದೇಶದಲ್ಲಿ ಮನೆ ನಿರ್ಮಿಸಲು, ಅಪಾರ್ಟ್‌ಮೆಂಟ್ ನಿರ್ಮಿಸಲು ಹೇಗೆ ಅನುಮತಿ ಕೊಡುತ್ತಾರೋ ತಿಳಿಯುತ್ತಿಲ್ಲ ಎಂದರು.
ಒಂದು ಕಾಲದಲ್ಲಿ ವಿಶ್ವೇಶ್ವರ ಇಂಡಸ್ಟ್ರಿಯಲ್ ಸಬರ್ಬ್‌ನಲ್ಲಿ ಅನೇಕ ಕಾರ್ಖಾನೆಗಳಿದ್ದವು. ಆದರೆ ಈಗ ಅಲ್ಲಿ ಎಲ್‌ಜಿಬಿ ರೋಲರ್ ಚೈನ್ ಫ್ಯಾಕ್ಟರಿ ಬಿಟ್ಟರೆ ಮಿಕ್ಕ ಎಲ್ಲಾ ಕಾರ್ಖಾನೆಗಳು ಮುಚ್ಚಿ ಹೋಗಿವೆ. ಸುತ್ತಮುತ್ತ ಅವ್ಯಾಹತವಾಗಿ ಕಲ್ಯಾಣ ಮಂಟಪ, ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಿವೆ. ಅದೇ ರೀತಿ ಮೇಟಗಳ್ಳಿಯಲ್ಲೂ ಕೂಡ ಕಾರ್ಖಾನೆ ಪಕ್ಕದಲ್ಲಿಯೇ ಅಪಾರ್ಟ್‌ಮೆಂಟ್‌ಗಳು, ಹೊಟೇಲ್‌ಗಳು ನಿರ್ಮಾಣವಾಗುತ್ತಿವೆ. ಮುಂದಿನ ದಿನಗಳಲ್ಲಿ ತಮಗೆ ಕಾರ್ಖಾನೆಗಳಿಂದ ಕಿರಿಕಿರಿಯಾಗುತ್ತಿದೆ, ಪರಿಸರ ಹಾಳಾಗುತ್ತಿದೆ ಎಂದು ದೂರು ನೀಡಿ ಕಾರ್ಖಾನೆಯನ್ನೇ ಮುಚ್ಚಿಸುವ ಪರಿಸ್ಥಿತಿ ಬರಬಹುದು. ಅದಕ್ಕೆ ನಾವು ಆಸ್ಪದ ನೀಡದೆ ಈಗಿನಿಂದಲೇ ಹೋರಾಟ ನಡೆಸಬೇಕು ಎಂದು ಹುರಿದುಂಬಿಸಿದರು.
ವ್ಯಕ್ತಿಯಿಂದ ದೇಶ ಬದಲಾಗಲ್ಲ: ಯಾವುದೇ ಪಕ್ಷ ಅಥವಾ ವ್ಯಕ್ತಿಯಿಂದ ದೇಶ ಬದಲಾಗಲ್ಲ. ಸಂಘಟಿತ ವಲಯಗಳು ರಾಜಕೀಯ ಜವಾಬ್ದಾರಿ ಅರಿತು ಉತ್ತಮ ಸರ್ಕಾರಕ್ಕೆ ಮುಂದಾಗಬೇಕು. ಒಬ್ಬ ಪ್ರಧಾನಿ ಹತ್ತು ವರ್ಷಗಳ ಕಾಲ ಮಾತನಾಡಲಿಲ್ಲ. ಮತ್ತೊಬ್ಬ ಪ್ರಧಾನಿ ಆಗುವ ಧಾಟಿಯಲ್ಲಿ ಬಾಯಿ ಬಡಿದುಕೊಳ್ಳುತ್ತಿದ್ದಾನೆ. ಇಂತವರು ನಮಗೆ ಬೇಕಾಗಿಲ್ಲ. ದೇಶದಲ್ಲಿ 13 ಕೋಟಿ ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಸುಪ್ರೀಂ ಕೋರ್ಟ್ ಗುತ್ತಿಗೆ ಪದ್ಧತಿಯನ್ನು ಅನಿಷ್ಠ ಪದ್ಧತಿ ಎಂದು ಜರಿದಿದೆ ಎಂದರು.
ಮೈಪಾಲ್ ಕಾರ್ಯನಿರ್ವಾಹಕ ನಿರ್ದೇಶಕ ವಿ.ಶ್ರೀಕಾಂತ್ ಮಾತನಾಡಿ, ಮೈಪಾಲ್ ಹತ್ತು ವರ್ಷಗಳ ಹಿಂದೆ ತಿಂಗಳಿಗೆ 2 ಲಕ್ಷ ಟ್ಯೂಬ್ ಉತ್ಪಾದಿಸುತ್ತಿತ್ತು. ಈಗ ತಿಂಗಳಿಗೆ 11.53 ಲಕ್ಷ ಟ್ಯೂಬ್ ಉತ್ಪಾದಿಸುತ್ತಿದ್ದೇವೆ. ಪ್ರತಿ ಸಾರಿ ಯಾವುದೇ ನ್ಯೂನ್ಯತೆ ಇಲ್ಲದೆ ತಯಾರಿಸಬೇಕು ಎಂಬುದು ನಮ್ಮ ಅಭಿಲಾಷೆ. ಆದರೂ, ಕಳೆದ ಮೂರು ವರ್ಷಗಳಲ್ಲಿ ಶೇ.7 ರಿಂದ 8 ರಷ್ಟು ಮಾರುಕಟ್ಟೆ ನಷ್ಟ ಅನುಭವಿಸಿದ್ದೇವೆ. ಮುಂದಿನ ದಿನಗಳಲ್ಲಿ ಟ್ಯೂಬ್‌ಲೆಸ್ ಟೈರ್ ಬರುವ ಸಾಧ್ಯತೆ ಇರುವುದರಿಂದ ಪರ್ಯಾಯ ಉತ್ಪಾದನೆಗೆ ನಾವು ಚಿಂತಿಸಬೇಕಿದೆ ಎಂದರು.
ಮೈಪಾಲ್ ವ್ಯವಸ್ಥಾಪಕ ನಿರ್ದೇಶಕ ಸಿ.ಡಿ. ನಾಗರಾಜನ್ ಕಾರ್ಯಕ್ರಮ ಉದ್ಘಾಟಿಸಿದರು. ಕಂಪನಿಯ ಎಂ. ವಿಜಯಕುಮಾರ್, ಎಸ್.ಆರ್.ಪಿ. ಪಾರ್ಥಸಾರಥಿ ಇದ್ದರು.

ಕಾರ್ಖಾನೆಗಳು ತಮ್ಮು ಸುತ್ತಮುತ್ತಲ ಪ್ರದೇಶವನ್ನು ಮಾಲಿನ್ಯ ಮುಕ್ತವಾಗಿಡಲು ಗಮನಹರಿಸಬೇಕು ಎಂದು ಚಾಮರಾಜ ಕ್ಷೇತ್ರದ ಶಾಸಕ ವಾಸು ಅಭಿಪ್ರಾಯಪಟ್ಟರು.
ಫಾಲ್ಕನ್ ಟೈರ್ಸ್ ಕಾರ್ಮಿಕರ ಒಕ್ಕೂಟವು ಗುರುವಾರ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಏರ್ಪಡಿಸಿದ್ದ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ನಗರದ ಕೈಗಾರಿಕಾ ಪ್ರದೇಶವನ್ನು ಮಾಲಿನ್ಯ ಮುಕ್ತ ಮಾಡುವುದು ಬಹುದೊಡ್ಡ ಸವಾಲಾಗಿದೆ. ಇದರಿಂದ ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದರು.
ಪರಿಸರ ಉಳಿಸುವ ಜವಾಬ್ದಾರಿ ಕಾರ್ಖಾನೆಗಳ ಆಡಳಿತ ಮಂಡಳಿಗಳ ಮೇಲಿದೆ. ಸಾಧ್ಯವಾದಷ್ಟು ಮುತುವರ್ಜಿ ವಹಿಸಿ ಪರಿಸರ ಕಾಪಾಡಬೇಕು. ಕಾರ್ಖಾನೆಯ ಲಾಭಾಂಶವನ್ನು ಕಾರ್ಮಿಕರಿಗೂ ಹಂಚಬೇಕು. ಈ ಹಿಂದೆ ಇದ್ದ ಕೆ.ಆರ್. ಮಿಲ್, ಜಾವಾದಂತಹ ಕಾರ್ಖಾನೆಗಳು ನಿರ್ವಹಣೆಯ ಸಮಸ್ಯೆಯಿಂದ ಮುಚ್ಚಿ ಹೋದವು. ಇದರಿಂದ ಸಾವಿರಾರು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದರು. ಆದ್ದರಿಂದ ಕಾರ್ಖಾನೆಗಳು ಇಂತಹ ಘಟನೆಗಳಿಂದ ಪಾಠ ಕಲಿಯಬೇಕು ಎಂದು ಕಿವಿಮಾತು ಹೇಳಿದರು.
ಸುಸಜ್ಜಿತ ಇಎಸ್‌ಐ ಆಸ್ಪತ್ರೆ: ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ, ಕೈಕೊಟ್ಟ ಆರೋಗ್ಯ ಸುಧಾರಿಸುವ ಸಲುವಾಗಿ ನಗರದ ಕೆಆರ್‌ಎಸ್ ರಸ್ತೆಯಲ್ಲಿ ಸುಸಜ್ಜಿತ ಇಎಸ್‌ಐ ಆಸ್ಪತ್ರೆ ನಿರ್ಮಿಸಲು ಸರ್ಕಾರ ಮುಂದಾಗಿದೆ. ಖಾಸಗಿ ಆಸ್ಪತ್ರೆಯನ್ನೇ ಅವಲಂಬಿಸಿದ್ದ ಕಾರ್ಮಿಕರಿಗೆ ಈ ಆಸ್ಪತ್ರೆಯಿಂದ ಅನುಕೂಲವಾಗಲಿದೆ. ಪ್ರತಿಯೊಬ್ಬರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಫಾಲ್ಕನ್ ಟೈರ್ಸ್‌ನ ಉಪಾಧ್ಯಕ್ಷ ವಿ.ಎಂ. ಶಶಿಧರ್, ಫಾಲ್ಕನ್ ಟೈರ್ಸ್‌ನ ಮಾರುಕಟ್ಟೆ ವಿಭಾಗದ ಅಧ್ಯಕ್ಷ ಜಸ್ಬೀರ್ ಸಿಂಗ್ ಮಾಟ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎಚ್.ಎಂ. ಶಿವಣ್ಣೇಗೌಡ, ಡಿಪಿಪಿಎಲ್ ಕಂಪೆನಿಯ ಸಿಇಒ ಎಸ್. ಬದ್ರಿನಾರಾಯಣನ್, ಪರಿಸರ ಅಧಿಕಾರಿ ನಿರಂಜನ್ ಇದ್ದರು.

ಕಾರ್ಮಿಕ ದಿನಾಚರಣೆ ಅಂಗವಾಗಿ ಆಶೋದಯ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಬುಧವಾರ ಮಧ್ಯರಾತ್ರಿ ಜಾಥಾ ಹಮ್ಮಿಕೊಂಡಿದ್ದರು. ಈ ಜಾಥಾಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎನ್.ಆರ್. ವಿಜಯ್ ಅವರು ಕೆ.ಆರ್. ಮೊಹಲ್ಲಾದ ಆಶೋದಯ ಸಮಿತಿ ಕಚೇರಿ ಬಳಿ ಚಾಲನೆ ನೀಡಿದರು. ಲೈಂಗಿಕ ವೃತ್ತಿಯನ್ನು ಇತರೆ ವೃತ್ತಿಗಳಂತೆ ಪರಿಗಣಿಸಬೇಕು. ಲೈಂಗಿಕ ಅಲ್ಪಸಂಖ್ಯಾತರು ಸಮಾಜದಲ್ಲಿ ಗೌರವದಿಂದ ಜೀವಿಸಲು ಅವಕಾಶ ಕಲ್ಪಿಸಿಕೊಡಬೇಕು. ಕಾರ್ಮಿಕ ಸಮುದಾಯದ ಒಂದು ಭಾಗವಾಗಿ ಲೈಂಗಿಕ ಅಲ್ಪಸಂಖ್ಯಾತರನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಕೆ.ಆರ್. ಮೊಹಲ್ಲಾದಿಂದ ಆರಂಭವಾದ ಜಾಥಾವು ಕಾಡಾ ಕಚೇರಿ ಎದುರಿನ ರಸ್ತೆ, ಮಾರಮ್ಮ ದೇವಸ್ಥಾನ, ಹಾರ್ಡಿಂಜ್ ವೃತ್ತ, ಆಲ್ಬರ್ಟ್ ವಿಕ್ಟರ್ ರಸ್ತೆ ಮೂಲಕ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಅಂತ್ಯಗೊಂಡಿತು. ಆಶೋದಯ ಸಮಿತಿಯ ಲಕ್ಷ್ಮಿ, ಸವಿತಾ, ಅಕ್ರಂ ಪಾಷ ನೇತೃತ್ವ ವಹಿಸಿದ್ದರು.

ಕಾರ್ಮಿಕರ ಸೇವೆ ಸಮಾಜಕ್ಕೆ ಅನಿವಾರ್ಯವಾಗಿದ್ದು, ಅವರ ದುಡಿಮೆಯನ್ನು ಸನ್ಮಾನಿಸುವುದು ನಮ್ಮ ಕರ್ತವ್ಯ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ.ಸೋಮಶೇಖರ್ ಅಭಿಪ್ರಾಯಪಟ್ಟರು. ಗುರುವಾರ ನಗರದಲ್ಲಿ ನಡೆದ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಅಸಂಘಟಿತ ಕಾರ್ಮಿಕರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸಲುವಾಗಿ ಅವರ ಸೇವೆ ಗುರುತಿಸುವ ಕೆಲಸವಾಗಬೇಕು. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು. ಇದೇ ವೇಳೆ ವಾಹನ ದುರಸ್ತಿ ಕ್ಷೇತ್ರದ ಎಂ.ಡಿ.ಜಮೀರ್ ಅಹಮ್ಮದ್, ಜಿಯಾ, ಮೊಹಮ್ಮದ್ ಇಲಿಯಾಸ್, ಆಟೋ ಚಾಲಕ ಮಹದೇವಯ್ಯ, ರಾಮು, ಕಟ್ಟಡ ಕಾರ್ಮಿಕ ಮಹದೇವ, ಚಿಕ್ಕಣ್ಣ, ಪೌರಕಾರ್ಮಿಕರಾದ ಶಂಕರ, ಪುಟ್ಟಸ್ವಾಮಿ, ತಿಮ್ಮಯ್ಯ, ಎಲ್.ಮಣಿ, ತೋಪಯ್ಯ, ಗುರುನಾಥ, ಸತೀಶ್, ಶ್ವೇತಾ, ಮಾದಯ್ಯ, ಮನೆಗೆಲಸದವರಾದ ಮಾದಮ್ಮ, ಗೌರಮ್ಮ ಅವರನ್ನು ಸನ್ಮಾನಿಸಲಾಯಿತು. ಕಾಂಗ್ರೆಸ್ ನಗರಾಧ್ಯಕ್ಷ ಸಿ.ದಾಸೇಗೌಡ, ಬ್ಲಾಕ್ ಅಧ್ಯಕ್ಷರಾದ ಸೋಮು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement