ಜಮೀನು ಕಬಳಿಕೆ ಯತ್ನ: ಆರೋಪ
ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮೇ 2
ರಿಯಲ್ ಎಸ್ಟೇಟ್ ಉದ್ಯಮಿ ಒಬ್ಬರು ಬಲವಂತವಾಗಿ ನಮ್ಮಿಂದ ಜಮೀನನ್ನು ತಮ್ಮ ವಶಕ್ಕೆ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಕಳಸ್ತವಾಡಿಯ ರುಕ್ಮಿಣಮ್ಮ ಆರೋಪಿಸಿದರು.
ತಮ್ಮ ಮಾವ ಶಂಕರಪ್ಪ ಅವರು ಮಾಜಿ ಯೋಧರಾಗಿದ್ದ ಕಾರಣಕ್ಕೆ 1965 ರಲ್ಲಿ ಸರ್ಕಾರ ಅವರಿಗೆ ಹುಣಸೂರು ಬಳಿ ಜಮೀನು ನೀಡಲು ಮುಂದಾಯಿತು. ಆದರೆ ನಾವು ಮೈಸೂರು ಬಳಿ ಬೇಕೆಂದಾಗ 10 ಗುಂಟೆ ಜಮೀನು ನೀಡಿತ್ತು. ನಾಗನಹಳ್ಳಿ ಗ್ರಾಪಂ ವ್ಯಾಪ್ತಿಯ ಸರ್ವೆ ನಂ.317, 318 ಮತ್ತು 323ರ ವ್ಯಾಪ್ತಿಗೆ ಒಳಪಡುವ ಈ ಜಮೀನಿಗೆ ಸಂಬಂಧಿಸಿದ ದಾಖಲೆಗಳು ತಾಲೂಕು ಕಚೇರಿ ಪತ್ರಾಗಾರದ ಎಂಡಿಆರ್ 1 64- 65ರಲ್ಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆದರೆ ಏ.30 ರಂದು ಮೇಟಗಳ್ಳಿ ಪೊಲೀಸರು, ಕಂದಾಯ ನಿರೀಕ್ಷಕ ಉಮೇಶ್ ಮತ್ತು ಇತರರು ಬಂದು ಜಮೀನು ಸರ್ಕಾರದ ವಶದಲ್ಲಿದ್ದು, ಇದನ್ನು ಬಿಟ್ಟುಕೊಡಬೇಕು ಎಂದು ಒತ್ತಾಯಿಸಿ, ತಮ್ಮ ಜಮೀನಿನಲ್ಲಿ ಬೆಳೆಯಲಾಗಿದ್ದ ಬೆಳೆಗೆ ಮಣ್ಣು ಸುರಿದಿದ್ದಾರೆ. ಅವರ ಬೆದರಿಕೆಗೆ ನಾವು ಬಗ್ಗದಿದ್ದಾಗ ಅವರು ಬರಿಗೈಯಲ್ಲಿ ಹಿಂದಿರುಗಿದ್ದಾರೆ ಎಂದು ಹೇಳಿದರು.
ತಮ್ಮ ಜಮೀನಿನ ಬಳಿ ರಿಯಲ್ ಎಸ್ಟೇಟ್ ನಡೆಸುತ್ತಿರುವ ಮಹೇಂದ್ರ ಮತ್ತು ನಿಂಗೇಗೌಡ ಎಂಬವರ ಕುತಂತ್ರ ಈ ಘಟನೆಯ ಹಿಂದೆ ಇದೆ. ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕೂ ಸಹ ಘಟನೆಯಲ್ಲಿದೆ. ಈ ಸಂಬಂಧ ಜಿಲ್ಲಾಧಿಕಾರಿ, ಲೋಕಾಯುಕ್ತರು ಮತ್ತು ಡಿಸಿಪಿ ರಾಜಣ್ಣ ಅವರಿಗೆ ದೂರು ನೀಡಿದ್ದೇವೆ ಎಂದು ರುಕ್ಮಿಣಮ್ಮ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕುಮಾರ್ ಇದ್ದರು.