ನಿಗದಿತ ತಂಬಾಕು ಬೆಳೆಯಲು ಸೂಚನೆ
ಪಿರಿಯಾಪಟ್ಟಣ: ತಂಬಾಕು ಮಂಡಳಿ ನಿಗದಿಪಡಿಸಿದಷ್ಟೆ ತಂಬಾಕು ಬೆಳೆಯುವಂತೆ ಕಂಪಲಾಪುರ ತಂಬಾಕು ಹರಾಜು ಮಾರುಕಟ್ಟೆ- 61 ಹರಾಜು ಅಧೀಕ್ಷಕ ಎಂ.ಕೆ. ಪುರುಷೋತ್ತಮರಾಜೇ ಅರಸ್ ಹೇಳಿದರು. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ತಂಬಾಕು ಬೆಳೆಯಬಾರದು. ಇತರೆ ಜಾಗದಲ್ಲಿ ವಾಣಿಜ್ಯ ಬೆಳೆಗಳಾದ ಶುಂಠಿ, ಅರಿಶಿನ, ರೇಷ್ಮೆ, ಹತ್ತಿ ಬೆಳೆಗಳನ್ನು ಬೆಳೆಯುವುದು ಸೂಕ್ತ. ಇತ್ತೀಚೆಗೆ ಭೂಮಿಯು ಫಲವತ್ತತೆ ಕಳೆದು ಕೊಳ್ಳುತ್ತಿದೆ. ಇದರಿಂದಾಗಿ ಬೆಳೆಯ ಉತ್ಪಾದನೆಯಲ್ಲಿ ಕುಂಠಿತಗೊಳ್ಳುವ ಸಾಧ್ಯತೆ ಇದೆ. ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರೈತರು ಜಾಗರೂಕರಾಗುವಂತೆ ಸಲಹೆ ನೀಡಿದರು. ಬೆಳೆಗಾರರ ಹಿತ ಕಾಪಾಡಲು ಮಂಡಳಿ ಹಾಗೂ ಕಂಪನಿ ಅಧಿಕಾರಿಗಳ ಮುಖಾಂತರ ಮಾಹಿತಿ ಶಿಬಿರಗಳನ್ನು ನಡೆಸುತ್ತಿದೆ. ಕರ್ನಾಟಕದಲ್ಲಿ 2013- 14ನೆ ಸಾಲಿನಲ್ಲಿ 102.01 ಮಿಲಿಯನ್ ಕೆಜಿ ತಂಬಾಕು ಉತ್ಪಾದನೆಯಾಗಿದ್ದು, ಮಾರುಕಟ್ಟೆ ಅವಧಿಯಲ್ಲಿ ಬೆಲೆಯಲ್ಲಿ ಏರುಪೇರಾಗಿದ್ದನ್ನು ರೈತರು ಮನದಟ್ಟು ಮಾಡಿಕೊಂಡು ಮಂಡಳಿ ನಿಗದಿಪಡಿಸಿದಷ್ಟೆ ತಂಬಾಕನ್ನು ಬೆಳೆಯುವಂತೆ ಸಲಹೆ ನೀಡಿದರು.