ರೋಗಪೀಡಿತ ತೋಟಕ್ಕೆ ಅಧಿಕಾರಿಗಳ ದೌಡು
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಮೇ 1
ಕೀಟಬಾಧೆಗೆ ಒಳಗಾಗಿ ಬಾಳೆ ಹಾಗೂ ತೆಂಗು ಬೆಳೆ ನಾಶವಾಗುತ್ತಿದ್ದ ತಾಲೂಕಿನ ಹುಣಸೆಕುಪ್ಪೆ ತೋಟಗಳಿಗೆ ತೋಟಗಾರಿಕೆ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಎಂ.ಸಿ. ಪ್ರಸಾದ್ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಸೂಚಿಸಿದರು.
'ಕನ್ನಡಪ್ರಭ'ದಲ್ಲಿ ಏ.28 ರಂದು ಕೀಟಬಾಧೆಗೆ ಬಾಳೆ, ತೆಂಗು ಬೆಳೆ ನಾಶ ಎಂಬ ಶೀರ್ಷಿಕೆ ಅಡಿ ಸಚಿತ್ರ ಸಹಿತ ಪ್ರಕಟವಾದ ವರದಿಯಿಂದ ಎಚ್ಚೆತ್ತ ಇಲಾಖೆ ಅಧಿಕಾರಿಗಳು ತಾಲೂಕಿನ ಹುಣಸೆಕುಪ್ಪೆ ಗ್ರಾಮದ ಜಾಕಿ ಸುರೇಶ್ ತೋಟಕ್ಕೆ ಭೇಟಿ ನೀಡಿ ಬೆಳೆಗೆ ತಗುಲಿರುವ ರೋಗ ಹಾಗೂ ಕೀಟಬಾಧೆಗೆ ಅಗತ್ಯ ಔಷಧಗಳನ್ನು ಸೂಚಿಸಿ ಬೆಳೆಯನ್ನು ರಕ್ಷಿಸಿಕೊಳ್ಳುವ ವಿಧಾನ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಎಂ.ಸಿ.ಪ್ರಸಾದ್, ಬಾಳೆ ಬೆಳೆಯಲ್ಲಿ ಸಸ್ಯ ಹೇನು ಮತ್ತು ಸಸ್ಯ ಜಂತು ಹುಳುಗಳು ಕಾಣಿಸಿಕೊಂಡಿದ್ದು ಕಂಕಳು ಕೂಳೆ ರೋಗ ಹಾಗೂ ಎಲೆಚುಕ್ಕಿ ರೋಗದಿಂದಾಗಿ ಬಾಳೆ ಬೆಳೆ ಹಾಳಾಗುತ್ತಿದೆ. ತೋಟದಲ್ಲಿ ಬೆಳೆಯಲಾಗಿರುವ ಸಿಲ್ವರ್ ಮರಗಳು ಎತ್ತರಕ್ಕೆ ಬೆಳೆದಿರುವ ಕಾರಣ ಇತರೆ ಬೆಳೆಗಳಾದ ತೆಂಗು, ಬಾಳೆ, ಕಾಫಿ ಮತ್ತಿತರ ಬೆಳೆಗಳಿಗೆ ಸೂರ್ಯನ ಕಿರಣ ಬೀಳದೆ ಬೆಳೆಗಳು ಸೊರಗಲು ಕಾರಣವಾಗಿದೆ. ಅಲ್ಲದೆ ಸಸಿಗಳ ನಡುವೆ ಅಗತ್ಯ ಅಂತರ ಕಾಪಾಡಿಲ್ಲ. ತೋಟದಲ್ಲಿ ತೇವಾಂಶ ಅಧಿಕವಾಗಿದೆ ಎಂದರು.
ಲೋಕಸಭಾ ಚುನಾವಣಾ ಕಾರ್ಯದಲ್ಲಿದ್ದ ಕಾರಣ ಹಾಗೂ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಸಕಾಲಕ್ಕೆ ತೋಟಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾಹಿತಿಗಾಗಿ ಭೇಟಿ ನೀಡಿ: ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಇಚ್ಛಿಸುವ ರೈತರಿಗೆ ಹಾಗೂ ತೋಟಗಾರಿಕೆ ಬೆಳೆಗೆ ಸಂಬಂಧಿಸಿದಂತೆ ಕಂಡುಬರುವ ಸಮಸ್ಯೆಗಳಿಗೆ ಇಲಾಖೆ ಸೂಕ್ತ ಸಲಹೆ ನೀಡಲಿದ್ದು ರೈತರು ಕಚೇರಿ ವೇಳೆಯಲ್ಲಿ ಭೇಟಿ ನೀಡಿ ಪರಿಹಾರ ಕಂಡುಕೊಳ್ಳುವಂತೆ ಮನವಿ ಮಾಡಿದರು.