ಕ್ರಾಂತಿಯೋಗಿಗೆ ಕೈ ಮುಗಿದ ಜನ
ಕ.ಪ್ರ.ವಾರ್ತೆ ಮೈಸೂರು ಮೇ 2
ಕ್ರಾಂತಿಯೋಗಿ ಬಸವಣ್ಣ ಅವರ ಜಯಂತಿ ಮಹೋತ್ಸವವನ್ನು ವಿವಿಧ ಸಂಘಸಂಸ್ಥೆಗಳ ವತಿಯಿಂದ ಶುಕ್ರವಾರ ಆಚರಿಸಲಾಯಿತು.
ನಾರಾಯಣಾಮೃತ ಫೌಂಡೇಷನ್: ಹೆಬ್ಬಾಳದ ನಾರಾಯಣಾಮೃತ ಫೌಂಡೇಷನ್ ವತಿಯಿಂದ ಅಕ್ಷಯ ತೃತೀಯ ಹಾಗೂ ಬಸವ ಜಯಂತಿ ಕಾರ್ಯಕ್ರಮ ಶುಕ್ರವಾರ ಇಲ್ಲಿನ ಸಾಧನ ಸಭಾಂಗಣದಲ್ಲಿ ನಡೆಯಿತು. ಚಾಮುಂಡಿಬೆಟ್ಟದ ಸ್ವಾಮಿ ಜಮುನಗಿರಿ ಹಾಗೂ ಚಿತ್ ಸ್ವರೂಪಾನಂದ ಸರಸ್ವತಿ ಅವರು ಅನುಗ್ರಹ ನುಡಿಗಳಾಡಿ ಬಸವಣ್ಣನವರ ಬದುಕು ಹಾಗೂ ಸಾಧನೆಗಳನ್ನು ಕುರಿತು ಮಾತನಾಡಿದರು. ಜನಸಾಮಾನ್ಯಕ್ಕೆ ಶರಣರ ಕೊಡುಗೆ ಎಂಬ ವಿಷಯ ಕುರಿತು ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿವಿಯ ನಿವೃತ್ತ ಪ್ರಾಧ್ಯಾಪಕ ಬಿ.ಕೆ. ಪ್ರಭುಪ್ರಸಾದ್ ಅವರು ಮಾತನಾಡಿದರು. ವಚನ ವಾಚನ ಮತ್ತು ದಾಸರ ಪದ ಕೀರ್ತನೆಗಳ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಆಲಾಪ್ ಮತ್ತು ಸ್ವರಶ್ರೀ ಅವರಿಗೆ ಬಹುಮಾನ ವಿತರಿಸಲಾಯಿತು. ಎಸ್.ಆರ್. ರಾವ್ ಸ್ವಾಗತಿಸಿದರು. ಲೀಲಾ ರಾವ್ ನಿರೂಪಿಸಿದರು.
ಸರ್ವಜನಾಂಗ ರಕ್ಷಣಾ ವೇದಿಕೆ
ಬಸವ ಜಯಂತಿ ಅಂಗವಾಗಿ ಸರ್ವಜನಾಂಗ ಹಿತ ರಕ್ಷಣಾ ವೇದಿಕೆಯು ಗನ್‌ಹೌಸ್ ಮುಂಭಾಗದಲ್ಲಿರುವ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಗೌರವ ಸಲ್ಲಿಸಿತು. ವೇದಿಕೆ ರಾಜ್ಯಾಧ್ಯಕ್ಷ ವೇಣುಗೋಪಾಲ್, ಮುಖಂಡರಾದ ಎಂ.ಪ್ರಭುದೇವ್, ಅಕ್ರಂ, ಎಲ್.ಮಹದೇವಪ್ಪ, ಮಲ್ಲಯ್ಯ, ಪದ್ಮ, ಬಿ.ಟಿ. ರಾಜಮ್ಮ, ವೇದಾವತಿ, ವಿಜಯಕುಮಾರ್, ಮತೀನ್ ಉಲ್ಲಾ ಷರೀಪ್, ಖುರ್ಷಿದ್ ಬೇಗಂ, ಪುಟ್ಟಯ್ಯ ಮುಂತಾದವರು ಭಾಗವಹಿಸಿದ್ದರು.
ಯಡಿಯೂರಪ್ಪ ಯುವಸೇನೆ
ಕರ್ನಾಟಕ ಬಿ.ಎಸ್.ಯಡಿಯೂರಪ್ಪ ಯುವಸೇನೆ ವತಿಯಿಂದ ಬಸವ ಜಯಂತಿ ಅಂಗವಾಗಿ ಗನ್‌ಹೌಸ್ ಮುಂಭಾಗವಿರುವ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಸೇನೆ ರಾಜ್ಯಾಧ್ಯಕ್ಷ ರುದ್ರಮೂರ್ತಿ, ಮುಖಂಡರಾದ ವೃಷಭೇಂದ್ರಸ್ವಾಮಿ, ರಾಜು ಪಟೇಲ್, ಜಯಪ್ಪ, ಗಿರೀಶ್, ಗುರುಸ್ವಾಮಿ, ನಂಜುಂಡಸ್ವಾಮಿ, ರಾಜು, ಗಿರೀಶ್ ಹಳೇಪುರ, ಗಜೇಂದ್ರ ಸ್ವಾಮಿ, ಲೋಕೇಶ್ ಭಾಗವಹಿಸಿದ್ದರು.
ಎಪಿಎಂಸಿ ಗೌರವ
ಬಸವ ಜಯಂತಿ ಅಂಗವಾಗಿ ಗನ್‌ಹೌಸ್ ಮುಂಭಾಗವಿರುವ ಪ್ರತಿಮೆಗೆ ಎಪಿಎಂಸಿ ಅಧ್ಯಕ್ಷ ರಘು, ಉಪಾಧ್ಯಕ್ಷ ಸಿದ್ದಯ್ಯ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಮುಖಂಡರಾದ ಕೃಷ್ಣಕುಮಾರ್ ಸಾಗರ್, ಬುಲೆಟ್ ಮಹದೇವು, ನಾಡನಹಳ್ಳಿ ರವಿ, ನಟರಾಜು ಇದ್ದರು.
ಸಿ.ಜೆ ದ್ವಾರಕೀಶ್ ನಮನ
ಕ್ರಾಂತಿಯೋಗಿ ಬಸವಣ್ಣ ಅವರ ಜಯಂತಿ ಅಂಗವಾಗಿ ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್ ಅವರು ಗನ್‌ಹೌಸ್ ಮುಂಭಾಗದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಎಂ. ಬಸವರಾಜು, ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.