ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಯಶಸ್ವಿ

Mainashree
Updated On : 2 May 2014, 10:44 am

ಕ.ಪ್ರ.ವಾರ್ತೆ  ಮೈಸೂರು  ಮೇ 2
ಕೊಲಂಬಿಯಾ ಏಷಿಯಾ ಆಸ್ಪತ್ರೆಯ ವೈದ್ಯರು ಗರ್ಭಿಣಿಯೊಬ್ಬರಿಗೆ ಅಪರೂಪದ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.
ಮೈಸೂರು ಮೂಲದ 19 ವರ್ಷದ ಸುನಿತಾ (ಹೆಸರು ಬದಲಿಸಲಾಗಿದೆ) ಎಂಬವರು 16 ವಾರದ ಗರ್ಭಿಯಾಗಿದ್ದಾಗ ಆಸ್ಪತ್ರೆಗೆ ಆಗಮಿಸಿದ್ದರು. ಅವರಿಗೆ ಆಯಾಸ, ಜಾಂಡೀಸ್, ಹೊಟ್ಟೆ ನೋವು ಇತರೆ ಸಮಸ್ಯೆಗಳಿದ್ದವು. ಅವರನ್ನು ತಪಾಸಣೆ ಮಾಡಿದಾಗ ರಕ್ತದ ಏರಿಳಿತದ ಸಮಸ್ಯೆಯಿಂದ ಬಳಲುತ್ತಿದ್ದರು. ಸುನಿತಾ ಮತ್ತು ಅವರ ಗರ್ಭದಲ್ಲಿದ್ದ 16 ವಾರದ ಭ್ರೂಣದ ಪ್ರಾಣಕ್ಕೂ ಸಂಚಕಾರ ತರುವುದಿತ್ತು ಎಂದು ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾದ ಡಾ.ಅನುಪಮಾ ದೀಪಕ್ ರೋಹಿಡೇಕರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಮೊದಲು ಸುನಿತಾ ಅವರು ವೈದ್ಯರನ್ನು ಸಂಪರ್ಕಿಸಿದಾಗ ಗರ್ಭ ತೆಗೆಸುವಂತೆ ಸಲಹೆ ನೀಡಿದ್ದರು. ನಮ್ಮ ಆಸ್ಪತ್ರೆಗೆ ಬಂದ ಬಳಿಕ ಗರ್ಭ ತೆಗೆಯುವ ಅವಶ್ಯಕತೆ ಇಲ್ಲ. ಚಿಕಿತ್ಸೆ ಮೂಲಕ ಸಮಸ್ಯೆ ಪರಿಹರಿಸುವ ಸಲಹೆ ನೀಡಿದ್ದೆವು. ಅದರಂತೆ ಹಿಗ್ಗಿಕೊಂಡಿದ್ದ ಸ್ಪ್ಲಿನ್ ಅನ್ನು ಲ್ಯಾಪ್ರೋಸ್ಕೋಪಿಕ್ (ಸಣ್ಣ ರಂಧ್ರದ ಮೂಲಕ) ಶಸ್ತ್ರಚಿಕಿತ್ಸೆ ಮೂಲಕ ಪಿತ್ತಕೋಶದ ಸಮೇತ ತೆಗೆಯಲಾಯಿತು. ಶಸ್ತ್ರಚಿಕಿತ್ಸೆಯ ಬಳಿಕ ತಾಯಿ ಮತ್ತು ಗರ್ಭದಲ್ಲಿದ್ದ ಮಗು ಆರೋಗ್ಯವಾಗಿತ್ತು. ಮಾ.11 ರಂದು ಸಹಜ ಪ್ರಸವ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ತಿಳಿಸಿದರು.
ಈಗ ತಾಯಿ ಆರೋಗ್ಯ ಸ್ಥಿರವಾಗಿದೆ. ಆದರೆ, ಮಗುವಿಗೆ ಜಾಂಡೀಸ್ ಇರುವುದು ಕಂಡುಬಂದಿದ್ದು, ಮಕ್ಕಳ ತಜ್ಞರು ಮಗುವಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. 3 ತಿಂಗಳ ಬಳಿಕ ಮಗುವಿನ ಆರೋಗ್ಯ ಸಂಪೂರ್ಣವಾಗಿ ಸುಧಾರಿಸಲಿದೆ ಎಂದರು.
ಸುನಿತಾ ಅವರು ಸಕಾಲದಲ್ಲಿ ಚಿಕಿತ್ಸೆ ಪಡೆದಿದ್ದರಿಂದ ಆಕೆ ಮತ್ತು ಮಗು ಇಬ್ಬರು ಅಪಾಯದಿಂದ ಪಾರಾಗಿದ್ದಾರೆ. ಸುನಿತಾ ಪ್ರಕರಣವು ರಕ್ತಹೀನತೆ (ಅನಿಮೀಯಾ) ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಪಾಠ ಆಗಬೇಕು. ಈ ಸಮಸ್ಯೆಯನ್ನು ಎಂದೂ ಕಡೆಗಣಿಸಬಾರದು. ಈ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿ, ಸೂಕ್ತ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು ಎಂದು ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement