ಸ್ವರ್ಣ ಖರೀದಿಗೆ ಸುವರ್ಣಯೋಗ
ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮೇ 2
ಅಕ್ಷಯ ತೃತೀಯದಂದು ವಿಶೇಷವಾಗಿ ಸ್ವರ್ಣ ಖರೀದಿಸಿದರೆ ಸಂಪತ್ತು ವೃದ್ಧಿಯಾಗಲಿದೆ ಎಂಬ ಪ್ರತೀತಿ ಇರುವ ಕಾರಣ, ಜನರು ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಆಭರಣ ಮಳಿಗೆಗೆ ಭೇಟಿ ನೀಡಿರುವುದು ಕಂಡುಬಂತು.
ಚಾಂದ್ರಮಾಸದ ಶುಕ್ಲಪಕ್ಷದ ತೃತೀಯದಂದು ಬರುವ ಈ ದಿನ ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಖರೀದಿಸುವುದರಿಂದ ಮತ್ತಷ್ಟು ಐಶ್ವರ್ಯ ಪ್ರಾಪ್ತಿಯಾಗಲಿದೆ ಎಂಬುವ ಕಾರಣ ಹೆಚ್ಚಿನ ಮಹಿಳೆಯರು ಬೆಳಗ್ಗಿನಿಂದಲೇ ನಗರದ ವಿವಿಧ ಆಭರಣ ಮಳಿಗೆಗೆ ಆಗಮಿಸಿ ನೆಚ್ಚಿನ ಒಡವೆಯ ಕೊಳ್ಳಲು ಮುಂದಾಗಿದ್ದರು.
ಕೆಲವು ಗ್ರಾಹಕರು ಈ ಮೊದಲೇ ತಮಗೆ ಬೇಕಾದ ಆಭರಣಗಳನ್ನು ಮುಂಗಡವಾಗಿ ಕಾಯ್ದಿರಿಸಿದ್ದು, ಈ ದಿನವಷ್ಟೆ ಬಂದು ಅದನ್ನು ತೆಗೆದುಕೊಂಡು ಹೋಗುವಲ್ಲಿಯೂ ತೊಡಗಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೆಲೆಯಲ್ಲಿ ಹೆಚ್ಚಳ ಇರಲಿಲ್ಲ. ಆಭರಣ ಚಿನ್ನ ಗ್ರಾಂಗೆ 2,830 ಹಾಗೂ ಬೆಳ್ಳಿ ಗ್ರಾಂಗೆ 43 ಇತ್ತು. ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಮಳಿಗೆಯ ವ್ಯವಸ್ಥಾಪಕ ನಿರ್ದೇಶಕ ಶರ್ಫುದ್ದೀನ್ ಮಾತನಾಡಿ, ಬೆಳಗ್ಗೆ 8 ಗಂಟೆಯಿಂದ ಗ್ರಾಹಕರು ಭೇಟಿ ನೀಡುತ್ತಿದ್ದು, ಯಾರು ಈ ಮೊದಲೆ ಮುಂಗಡವಾಗಿ ಅಭರಣವನ್ನು ಕಾಯ್ದಿರಿಸಿದ್ದಾರೋ ಅವರಿಗೆ 10 ಗ್ರಾಂ ಚಿನ್ನದ ಆಭರಣಕ್ಕೆ 4 ಗ್ರಾಂ ಬೆಳ್ಳಿ ನಾಣ್ಯವನ್ನು ಈ ದಿನದ ವಿಶೇಷವಾಗಿ ಉಚಿತವಾಗಿ ವಿತರಿಸಲಾಗುತ್ತಿದೆ ಎಂದರು.
ಯಾದವಗಿರಿಯ ಮಾಲತಿ ಎಂಬವರು ಮಾತನಾಡಿ, ಇತ್ತೀಚೆಗೆ ಅಕ್ಷಯ ತೃತೀಯ ಆಚರಿಸುತ್ತಿದ್ದು, ನನಗೂ ನಂಬಿಕೆ ಇರುವಂತೆ ಈ ದಿನ ಚಿನ್ನ ಹಾಗೂ ಬೆಳ್ಳಿ ಖರೀಸಿದರೆ ಹೆಚ್ಚೆಚ್ಚು ಆಭರಣ ಸೇರುತ್ತಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಗಂಗೆ ಭೂಮಿಗೆ ಹರಿದ ದಿನ, ಮಹಾಭಾರತ ರಚನೆಯಾದ ದಿನ, ಪರಶುರಾಮ ಹುಟ್ಟಿದ ದಿನ ಹಾಗೂ ಕುಚೇಲ ಕುಬೇರನಾದ ದಿನ ಎಂಬ ಈ ಎಲ್ಲಾ ವಿಶೇಷತೆಗಳನ್ನು ಅಕ್ಷಯ ತೃತೀಯ ಹೊಂದಿರುವುರಿಂದ ಇದೊಂದು ಸಡಗರದ ಹಬ್ಬವೆಂದು ಆಚರಿಸಿ ಸಂಭ್ರಮಿಸಲಾಗುತ್ತಿದೆ. ಅಲ್ಲದೆ ಗೃಹ ಪ್ರವೇಶ, ಮದುವೆ ಇತ್ಯಾದಿ ಶುಭ ಸಮಾರಂಭ ಹಮ್ಮಿಕೊಳ್ಳುವುದು ಇಲ್ಲವೆನ್ನುವಂತಿಲ್ಲ.