ಹಾಸ್ಟೆಲ್ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನಾಳೆ
ಕ.ಪ್ರ.ವಾರ್ತೆ ಮೈಸೂರು ಮೇ 2
ಅಕಾಡೆಮಿ ಫಾರ್ ಸ್ಟಡಿ ಆಫ್ ಯೂತ್ ಹಾಸ್ಟೆಲಿಂಗ್ ಫಾರ್ ಪೀಸ್ ಆ್ಯಂಡ್ ಇಂಟರ್‌ನ್ಯಾಷನಲ್ ಅಂಡರ್‌ಸ್ಟ್ಯಾಂಡಿಂಗ್ ಸಂಸ್ಥೆಯ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಮೇ 4ರ ಬೆಳಗ್ಗೆ 11ಕ್ಕೆ ಗೋಕುಲಂ 2ನೇ ಹಂತದ 5ನೇ ಮುಖ್ಯರಸ್ತೆಯಲ್ಲಿ ನಡೆಯಲಿದೆ.
ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾವು ಆರಂಭಿಸಿರುವ ಈ ಸಂಸ್ಥೆಯ ಶಿಲಾನ್ಯಾಸವನ್ನು ಯುಕೆಯ ಅಂತಾರಾಷ್ಟ್ರೀಯ ಹಾಸ್ಟೆಲಿಂಗ್‌ನ ಅಧ್ಯಕ್ಷ ಎಡಿತ್ ಅರ್ನಾಲ್ಟ್- ಬ್ರಿಲ್ ನೆರವೇರಿಸುವರು ಎಂದು ಯೂತ್ ಹಾಸ್ಟೆಲ್ ಕರ್ನಾಟಕ ಶಾಖೆಯ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಿ. ಮಾದೇಗೌಡ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಾಂತಿ ಮತ್ತು ಅಂತಾರಾಷ್ಟ್ರೀಯ ತಿಳಿವಳಿಕೆ ಮೂಡಿಸುವ ಉದ್ದೇಶದಿಂದ ಉತ್ತಮ ಗ್ರಂಥಾಲಯ ವ್ಯವಸ್ಥೆ ನೀಡುವುದು, ಅಲ್ಪಾವಧಿ ತರಗತಿಗಳನ್ನು ಆರಂಭಿಸುವುದು, ಅಲ್ಲದೆ ಸಾಹಸ ಕ್ರೀಡೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವುದು, ವಿವಿಧ ಕಿರುಚಿತ್ರಗಳನ್ನು ತಯಾರಿಸುವುದು, ಪ್ರವಾಸೋದ್ಯಮದಕ್ಕೆ ಆಗಮಿಸುವ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಗಮಿಸುವ ಯುವಕರಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸುವುದು ಮತ್ತು ಒಳ ಮತ್ತು ಹೊರಾಂಗಣ ಕ್ರೀಡೆಗಳನ್ನು ಆಯೋಜಿಸುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದು ಅವರು ವಿವರಿಸಿದರು.
ಈ ಕಟ್ಟಡದಲ್ಲಿ ಸುಮಾರು 50 ರಿಂದ 100 ಮಂದಿ ಕೂರಬಹುದಾದ ಹವಾನಿಯಂತ್ರಿತ ಕಿರುಚಿತ್ರ ಮಂದಿರ, 200 ಮಂದಿ ಕೂರುವ ಹವಾನಿಯಂತ್ರಿತ ಸಭಾಂಗಣ, 40 ಮಂದಿ ಕೂರುವ ಹವಾನಿಯಂತ್ರಿತ ಸಮಿತಿ ಕೊಠಡಿ, ಸ್ವಾಗತಕಾರರ ಕೊಠಡಿ, ಊಟದ ಹಾಲ್, ಅಡುಗೆ ಮನೆ, ಒಳಾಂಗಣ ಕ್ರೀಡಾಂಗಣ, 10 ಹವಾನಿಯಂತ್ರಿತ ಮತ್ತು ನಾಲ್ಕು ಮಂದಿ ಮಲಗುವ 20 ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಎಸ್. ವೆಂಕಟ್ ನಾರಾಯಣನ್, ವಕೀಲೆ ಎಂ.ಎ. ಹೇಮಲತಾ ಇದ್ದರು.