ಮೈಮುಲ್‌ನಿಂದ ಪರಿಹಾರ ವಿತರಣೆ
ಮೈಸೂರು: ಮೈಸೂರು ಜಿಲ್ಲೆಯಲ್ಲಿ 493 ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ 724 ರಾಸುಗಳಂತೆ ಒಟ್ಟು 1,217 ರಾಸುಗಳು ಕಾಲುಬಾಯಿ ಜ್ವರದಿಂದ ಮರಣ ಹೊಂದಿರುವುದರನ್ನು ಗುರುತಿಸಿ, ಮೈಸೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ವತಿಯಿಂದ ಕರ್ನಾಟಕ ಹಾಲು ಮಹಾಮಂಡಳಿ ಮುಖಾಂತರ 92,17,552 ಪರಿಹಾರಧನವಾಗಿ ಸರ್ಕಾರಕ್ಕೆ ಪಾವತಿಸಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ಸುರೇಶ್ ಬಾಬು ಹೇಳಿದ್ದಾರೆ. ಅಲ್ಲದೇ ಮೈಸೂರು- ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಮತ್ತು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಯೋಗದೊಂದಿಗೆ ರಾಸುಗಳಿಗೆ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮವನ್ನು 2014ರ ಫೆ.15ರಿಂದ ಮಾ.14ರವರೆಗೆ ಕೈಗೊಂಡು, ಮೈಸೂರು ಜಿಲ್ಲೆಯಲ್ಲಿ 5,66,453 ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ 2,49,389 ಒಟ್ಟಾರೆ 8,15,842 ರಾಸುಗಳಿಗೆ ಕಾಲುಬಾಯಿ ಜ್ವರ ಲಸಿಕೆ ನೀಡಿದೆ.
ದುರ್ಬಲ ವರ್ಗದರಿಗೆ ಶಿಕ್ಷಣ ಮಹತ್ಕಾರ್ಯ
ಕ.ಪ್ರ.ವಾರ್ತೆ , ಮೈಸೂರು , ಮೇ 3
ಸಮಾಜದ ದುರ್ಬಲ ವರ್ಗದವರಿಗೆ ಶಿಕ್ಷಣ ನೀಡುವುದು ಒಂದು ಮಹತ್ಕಾರ್ಯ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಹಿರಿಯ ಸಹಾಯಕ ನಿರ್ದೇಶಕಿ ಎಂ.ಡಿ. ಉಷಾ ಬಣ್ಣಿಸಿದರು.
ಜೆಎಸ್‌ಎಸ್ ಕರ್ನಾಟಕ ಮುಕ್ತ ವಿದ್ಯಾಲಯವು ಕಲಿಕಾ ಕೇಂದ್ರಗಳ ಸಮನ್ವಯಾಧಿಕಾರಿಗಳ ವಾರ್ಷಿಕ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿ, ಜೆಎಸ್‌ಎಸ್ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ. ಶಿಕ್ಷಣದಿಂದ ವಂಚಿತರಾದ ಸಮಾಜದ ದುರ್ಬಲ ವರ್ಗದವರನ್ನು ಸಬಲೀಕರಿಸುವ ಪ್ರಯತ್ನ ಮಾಡುತ್ತಿದೆ. ಈ ಪ್ರಯತ್ನ ಪೂರ್ಣ ಫಲ ಕೊಡಬೇಕಾದರೆ ಕಲಿಕಾ ಕೇಂದ್ರಗಳ ಸಮನ್ವಯಾಧಿಕಾರಿಗಳು ಪರಿಪೂರ್ಣವಾಗಿ ಕಾರ್ಯನಿರ್ವಹಿಸಬೇಕೆಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಶಿಕ್ಷಣ ವಿಭಾಗದ ನಿರ್ದೇಶಕ ಕೆ. ಶಾಂತಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಿಕಾ ಕೇಂದ್ರಗಳಲ್ಲಿ ಸುಧಾರಣೆಯಾದಾಗ ಶಿಕ್ಷಣ ನೀಡುವ ಉದ್ದೇಶ ಸಫಲವಾಗುತ್ತದೆ ಎಂದರು.
ಜೆಎಸ್‌ಎಸ್ ಮುಕ್ತ ವಿವಿ ನಿರ್ದೇಶಕ ಡಾ.ಕೆ.ಎಂ. ವೀರಯ್ಯ ಸ್ವಾಗತಿಸಿದರು. ವಿದ್ಯಾಲಯದ ಉಪನಿರ್ದೇಶಕ ಆರ್. ನಾಗರಾಜಾಚಾರ್ ವಂದಿಸಿದರು.
ಪೀಠ ಮೈಸೂರಿಗೆ
ಮೈಸೂರು: ದೆಹಲಿಯ ಕಾನೂನು ಬಾಹಿರ ಚಟುವಟಿಕೆ (ತಡೆ) ನ್ಯಾಯಾಧೀಕರಣ ಪೀಠವು ಮೇ 7 ಮತ್ತು 8ರಂದು ಮೈಸೂರಿಗೆ ಆಗಮಿಸಲಿದೆ. ಮೇ 7ರ ಬೆಳಗ್ಗೆ 10ಕ್ಕೆ ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಸಭೆ ಏರ್ಪಡಿಸಿದ್ದು, ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ದೂರು ನೀಡಲಿಚ್ಛಿಸುವವರು ತಮ್ಮ ಹೇಳಿಕೆಯೊಂದಿಗೆ ಅಫಿಡವಿಟ್ ಸಲ್ಲಿಸುವಂತೆ ಕೋರಲಾಗಿದೆ.
ಕಾರ್ಮಿಕರ ದಿನ
ಮೈಸೂರು: ಜಿಲ್ಲಾ ಖಾಸಗಿ ಬಸ್‌ಗಳ ಕಾರ್ಮಿಕರ ಸಂಘದ ವತಿಯಿಂದ ಕಾರ್ಮಿಕರ ದಿನ ಆಚರಿಸಲಾಯಿತು. ಸಂಘದ ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷ ಎಂ.ಬಿ. ಕುಮಾರಸ್ವಾಮಿ, ಕಾರ್ಯದರ್ಶಿ ಎನ್. ಕೆಂಪರಾಜು, ಖಜಾಂಚಿ ಎಸ್. ಕುಮಾರ್, ಉಪಕಾರ್ಯದರ್ಶಿ ಜಾಕಿರ್, ಸಹ ಕಾರ್ಯದರ್ಶಿ ಕುಮಾರ್, ನಿರ್ದೇಶಕ ರಮೇಶ್ ಭಾಗವಹಿಸಿದ್ದರು.
ಚಿನ್ನದ ಪದಕ
ಮೈಸೂರು: ಕಾರ್ಮಿಕರ ದಿನಾಚರಣೆ ಅಂಗವಾಗಿ ಗ್ಲೋಬಲ್ ಎಕನಾಮಿಕ್ ಪ್ರೊಗ್ರೆಸ್ ಆ್ಯಂಡ್ ರಿಸರ್ಚ್ ಅಸೋಸಿಯೇಷನ್ ವತಿಯಿಂದ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಶಿಕ್ಷಣ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಜೆಎಸ್‌ಎಸ್ ಕರ್ನಾಟಕ ಮುಕ್ತ ವಿದ್ಯಾಲಯದ ನಿರ್ದೇಶಕ ಡಾ.ಕೆ.ಎಂ. ವೀರಯ್ಯ ಹಾಗೂ ಮಹಾರಾಣಿ ಕಲಾ ಕಾಲೇಜಿನ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ನೇ.ತಿ. ಸೋಮಶೇಖರ್ ಅವರಿಗೆ ರಾಷ್ಟ್ರೀಯ ನಾಗರಿಕ ಚಿನ್ನದ ಪದಕ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಕೇಂದ್ರದ ಮಾಜಿ ಸಚಿವ ವೆಂಕಟಾಪತಿ, ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ಜ್ಞಾನಪ್ರಕಾಶ್ ಮತ್ತು ಅಣ್ಣಾಮಲೈ ವಿವಿಯ ಮಾಜಿ ಕುಲಪತಿ ಡಾ. ಮನ್ನಾರ್ ಜವಾಹರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
18ಕ್ಕೆ ಸಂವಾದ
ಮೈಸೂರು: ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಮತ್ತು ರಂಗವಲ್ಲಿ ವತಿಯಿಂದ ನಟರಾಜ್ ಹುಳಿಯಾರ್ ಅವರ ಪಿ. ಲಂಕೇಶ್ ಹಾಗೂ ಡಿ.ಆರ್. ನಾಗರಾಜ್ ಕುರಿತ ಸೃಜನಶೀಲ ಕಥಾನಕ ಇಂತಿ ನಮಸ್ಕಾರಗಳು ಪುಸ್ತಕ ಕುರಿತು ಓದು ಹಾಗೂ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮವು ಮೇ 18ರ ಬೆಳಗ್ಗೆ 10.30ಕ್ಕೆ ಕಲಾಮಂದಿರದ ಮನೆಯಂಗಳದ ಜಿ. ಶ್ರೀನಿವಾಸ್‌ಕುಮಾರ್ ವೇದಿಕೆಯಲ್ಲಿ ನಡೆಯಲಿದೆ. ನಾರಾಯಣ್ ಕೆ. ಕ್ಯಾಸಂಬಳ್ಳಿ, ಎಚ್. ಕಾವ್ಯಶ್ರೀ, ಚರಿತಾ, ರವೀಚಂದ್ರ ಚಿಕ್ಕೆಂಪಿಹುಂಡಿ, ಶಿವಕುಮಾರ್ ಕಾರೆಪುರ ಪುಸ್ತಕ ಕುರಿತು ಮಾತನಾಡುವರು. ಸೋಮಲತಾ ಅತಿಥಿಯಾಗಿ ಭಾಗವಹಿಸುವರು. ಸಂವಾದದಲ್ಲಿ ಡಾ. ನಟರಾಜ್ ಹುಳಿಯಾರ್ ಭಾಗವಹಿಸುವರು. ಪ್ರೊ. ಕಾಳೇಗೌಡ ನಾಗವಾರ ಅಧ್ಯಕ್ಷತೆ ವಹಿಸುವರು.
ಜೆಎಸ್‌ಎಸ್ ಅನಾಥಾಲಯಕ್ಕೆ ಅರ್ಜಿ ಆಹ್ವಾನ
ಮೈಸೂರು: ಜೆಎಸ್‌ಎಸ್ ಮಹಾವಿದ್ಯಾಪೀಠ ನಡೆಸುತ್ತಿರುವ ನಂಜುಮಳಿಗೆಯ ಕ್ಯಾತನಹಳ್ಳಿ ಸಾಹುಕಾರ್ ಸಿದ್ಧಲಿಂಗಯ್ಯನವರ ಅನಾಥಾಲಯಕ್ಕೆ 2014-15ನೇ ಸಾಲಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನಿಸಿದ್ದು, 5ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಮೇ 20ರೊಳಗೆ ಅರ್ಜಿ ಸಲ್ಲಿಸಬಹುದು. ದಾಖಲಾದ ವಿದ್ಯಾರ್ಥಿಗಳಿಗೆ ತಿಂಡಿ, ಊಟ- ವಸತಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಕಾರ್ಯದರ್ಶಿ ಎಸ್. ಶಿವಕುಮಾರಸ್ವಾಮಿ ತಿಳಿಸಿದ್ದಾರೆ.
ಪೊಲೀಸ್ ಆಯುಕ್ತರ ಜತೆ ಸಂವಾದ ನಾಳೆ
ಮೈಸೂರು: ಭಾರತೀಯ ಕೈಗಾರಿಕಾ ಒಕ್ಕೂಟ ಜಿಲ್ಲಾ ಘಟಕವು ಮೇ 5ರಂದು ಸಂಜೆ 5.30ಕ್ಕೆ ಹೋಟೆಲ್ ರಿಗಾಲಿಸ್‌ನಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಅವರೊಂದಿಗೆ ಸಂವಾದ ಏರ್ಪಡಿಸಲಾಗಿದೆ ಎಂದು ದೂ. 0821- 2516319 ಸಂಪರ್ಕಿಸಬಹುದು.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾರ್ಯಕ್ರಮ
ಮೈಸೂರು: ಫಿಯಟ್ ಕಾರು ಉತ್ಪಾದನಾ ಸಂಸ್ಥೆಯು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ್ದು, ಈ ಸಂಬಂಧ ಮೇ 5ರಂದು ಬೆಳಗ್ಗೆ 11ಕ್ಕೆ ಹುಣಸೂರು ರಸ್ತೆಯಲ್ಲಿರುವ ಅರಸ್ ಕಾರ್ ಶೋರೂಂನಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಾಗೇಶ್ ಬಸವನಹಳ್ಳಿ ಸಂವಾದ ನಡೆಸುವರು.
ನಾಳೆ ಸಂಜೆ ಮುಕ್ತ ವಿವಿ ಸಂಪರ್ಕ ತರಗತಿ
ಮೈಸೂರು: ಜ್ಞಾನಬುತ್ತಿ ಸಂಸ್ಥೆಯು ಮುಕ್ತ ವಿವಿಯಲ್ಲಿ ಕನ್ನಡ ಎಂ.ಎ ವ್ಯಾಸಂಗ ಮಾಡುತ್ತಿರುವವರಿಗಾಗಿ ಕನ್ನಡ ರಾಜ್ಯೋತ್ಸವ ಎಂಬ ಸಂಪರ್ಕ ತರಗತಿ ನಡೆಸಲಿದ್ದು, ಮೇ 5ರಂದು ಸಂಜೆ 6ಕ್ಕೆ ಪ್ರಾಧ್ಯಾಪಕ ಡಾ.ನೀಲಗಿರಿ ಎಂ. ತಳವಾರ್ ಉದ್ಘಾಟಿಸುವರು. ಡಾ.ಲತಾ ಮೈಸೂರು, ಪ್ರೊ.ಎಂ.ಕೃಷ್ಣೇಗೌಡ ಭಾಗವಹಿಸುವರು. 6ರ ಸಂಜೆ 6ಕ್ಕೆ ತೇ.ಸಿ. ವಿಶ್ವೇಶ್ವರಯ್ಯ ರಚಿಸಿರುವ ಶಿಕ್ಷಣ ದರ್ಪಣ ಮತ್ತು ದೀಪದ ಬೆಳಕು ಎಂಬ 2 ಕೃತಿಗಳನ್ನು ಪ್ರೊ. ಮೊರಬದ ಮಲ್ಲಿಕಾರ್ಜುನ ಬಿಡುಗಡೆಗೊಳಿಸುವರು. ಪ್ರೊ. ಮಲೆಯೂರು ಗುರುಸ್ವಾಮಿ, ಡಿ.ಎನ್. ಲೋಕಪ್ಪ ಭಾಗವಹಿಸುವರು.
ನಾಳೆಯಿಂದ ನೃತ್ಯ, ಜ್ಯೋತಿಷ್ಯ ಕಾರ್ಯಾಗಾರ
ಮೈಸೂರು: ಮೈಸೂರು ಮಿರಾಕಲ್ಸ್ ಡ್ಯಾನ್ಸ್ ಮತ್ತು ಏರೊಬಿಕ್ಸ್ ವತಿಯಿಂದ ಮೇ 5ರಿಂದ 24ರವರೆಗೆ ನೃತ್ಯ ಕಾರ್ಯಾಗಾರ ಆಯೋಜಿಸಿದ್ದು, ಇದರಲ್ಲಿ ಹಲವು ಬಗೆಯ ನೃತ್ಯ ಶೈಲಿಗಳ ತರಬೇತಿ ನೀಡಲಿದೆ. ಹೆಚ್ಚಿನ ವಿವರಗಳಿಗೆ ಮೋಹನ್‌ಕುಮಾರ್, ಮೈಸೂರು ಮಿರಾಕಲ್ಸ್, ಮೊ. 8861551552 ಸಂಪರ್ಕಿಸಬಹದು. ದಟ್ಟಗಳ್ಳಿಯ ಎಚ್ ಬ್ಲಾಕ್‌ನಲ್ಲಿರುವ ಶ್ರೀ ಮಾಯಕಾರ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರದ ವತಿಯಿಂದ ಮೇ 20ರ ಮಧ್ಯಾಹ್ನ 2.15ಕ್ಕೆ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಹಾಲ್‌ನಲ್ಲಿ ಉಚಿತ ಜ್ಯೋತಿಷ್ಯ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಪ್ರೊ.ಕೆ.ಬಿ. ಸಾಯಿನಾಥ್, ಪ್ರಸಾದ್ ಹಾಗೂ ಆರ್‌ಎಂ. ಮಧುದೀಕ್ಷಿತ್ ಉಪನ್ಯಾಸ ನೀಡುವರು.
ಪ್ರಾಧ್ಯಾಪಕ ಡಾ.ಜೋಸೆಫ್‌ಗೆ ಬೀಳ್ಕೊಡುಗೆ
ಮೈಸೂರು: ಮೈಸೂರು ವಿವಿ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಪ್ರಾಧ್ಯಾಪಕ ಡಾ.ಕೆ.ಜೆ. ಜೋಸೆಫ್ ಅವರಿಗೆ ಮೇ 5ರಂದು ಬೆಳಗ್ಗೆ 11ಕ್ಕೆ ವಿಭಾಗದ ಸೆಮಿನಾರ್ ಹಾಲ್‌ನಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದು, ಪ್ರೊ.ಆರ್.ಎನ್. ಪದ್ಮನಾಭ, ಕೆ. ಶಿವಕುಮಾರ್ ಭಾಗವಹಿಸುವರು.
ಆಯುರ್ವೇದ ಆಸ್ಪತ್ರೆಯಲ್ಲಿ ಯೋಗ ಶಿಬಿರ
ಮೈಸೂರು: ಸ್ವಾಮಿ ವಿವೇಕಾನಂದ ಜಿಲ್ಲಾ ಯೋಗ ಕೇಂದ್ರವು ಲಲಿತಾದ್ರಿಪುರ ರಸ್ತೆಯಲ್ಲಿರುವ ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆಯಲ್ಲಿ ಮೇ 5ರಿಂದ ಜೂ.5ರವರೆಗೆ ಆರೋಗ್ಯಕ್ಕಾಗಿ ಯೋಗ ಶಿಬಿರ ಏರ್ಪಡಿಸಿದ್ದು, ಮೊ. 98861 76690 ಸಂಪರ್ಕಿಸಬಹುದು.
ಸಂಸ್ಕೃತ ಪ್ರಶಿಕ್ಷಣಾರ್ಥಿಗಳ ಸಮಾರೋಪ
ಮೈಸೂರು: ಸಂಸ್ಕೃತ ಭಾರತೀ ಸಂಸ್ಥೆಯು ಮೇ 5ರ ಸಂಜೆ 6ಕ್ಕೆ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಂಸ್ಕೃತ ಪ್ರಶಿಕ್ಷಣಾರ್ಥಿಗಳಿಗೆ ಶುಭ ಹಾರೈಕೆ ಸಮಾರಂಭ ಏರ್ಪಡಿಸಿದ್ದು, ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಡಾ. ಸಿಪಿಕೆ, ಚ.ಮೂ. ಕೃಷ್ಣಶಾಸ್ತ್ರಿ, ಶ್ರೀಕಂಠಮೂರ್ತಿ ಭಾಗವಹಿಸುವರು.
ಗ್ರಂಥಾಲಯ ವಿಭಾಗದಲ್ಲಿ ದತ್ತಿ ಉಪನ್ಯಾಸ
ಮೈಸೂರು ವಿವಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಲ್ಲಿ ಮೇ 5ರ ಮಧ್ಯಾಹ್ನ 3.30ಕ್ಕೆ ಪ್ರೊ.ಕೆ.ಎಸ್. ದೇಶಪಾಂಡೆ ದತ್ತಿ ಉಪನ್ಯಾಸ ಏರ್ಪಡಿಸಿದ್ದು, ಪ್ರೊ.ಎಂ.ಎ. ಲಕ್ಷ್ಮೀತಾತಾಚಾರಿ ಉಪನ್ಯಾಸ ನೀಡುವರು.