ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಆಸ್ಪತ್ರೆಗೆ ದಾಖಲು

Vishwanath S
Updated On : 5 May 2014, 12:53 pm

ಮೈಸೂರು: ನಗರದ ರೈಲು ನಿಲ್ದಾಣದ ಎದುರಿನ ಜೆ.ಕೆ. ಮೈದಾನದ ಬಳಿ ಶುಕ್ರವಾರ ಸುಸ್ತಾಗಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು ಪೊಲೀಸರು ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆ.ಆರ್. ಆಸ್ಪತ್ರೆಯ ಕಲ್ಲು ಕಟ್ಟಡದ 10ನೇ ವಾರ್ಡ್‌ನಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಅಪರಿಚಿತ ವ್ಯಕ್ತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಇವರು ಬಂಬೂಬಜಾರ್ ನಿವಾಸಿ ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಚಹರೆ- 45 ವರ್ಷ, 5.5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಬಿಳಿ ಮತ್ತು ಕಪ್ಪು ಮಿಶ್ರಿತ ತಲೆ ಕೂದಲು, ಗಡ್ಡ ಬಿಟ್ಟಿದ್ದಾರೆ. ಹೊಟ್ಟೆಯ ಹತ್ತಿರ ಸಣ್ಣ ಕಪ್ಪು ಕಾರೆ ಹರಳಿದೆ. ಬಿಳಿ ಮತ್ತು ಆಕಾಶ ಬಣ್ಣದ ಗೆರೆಯುಳ್ಳ ಶರ್ಟ್, ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಇವರ ಬಗ್ಗೆ ಮಾಹಿತಿಯುಳ್ಳವರು ದೂ. 0821- 2418306 ಸಂಪರ್ಕಿಸಲು ದೇವರಾಜ ಠಾಣೆ ಪೊಲೀಸರು ಕೋರಿದ್ದಾರೆ.
ಅಪರಿಚಿತರ ಸಾವು
ಮೈಸೂರು: ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಅಪರಿಚಿತರು ಮೃತಪಟ್ಟಿದ್ದಾರೆ. ಕೆ.ಆರ್. ಆಸ್ಪತ್ರೆ ಆವರಣದ ಕಣ್ಣಾಸ್ಪತ್ರೆ ಬಳಿ 55 ವರ್ಷದ ಅಪರಿಚಿತ ವ್ಯಕ್ತಿ ಯಾವುದೋ ಕಾಯಿಲೆಯಿಂದ ನರಳಿ ಮೃತಪಟ್ಟಿದ್ದಾರೆ. ಚಹರೆ- 5.5 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ಸಣಕಲು ದೇಹ, ಬೂದು ಬಣ್ಣದ ಶರ್ಟ್, ಕಪ್ಪು ಪ್ಯಾಂಟ್ ಧರಿಸಿದ್ದಾರೆ. ಕೆ.ಆರ್. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಹುಚ್ಚೇಗೌಡ ಎಂಬವರ ಪತ್ನಿ ಜವರಮ್ಮ (75) ಮೃತಪಟ್ಟಿದ್ದಾರೆ. ಇವರ ವಾರಸುದಾರರು ಪತ್ತೆಯಾಗಿಲ್ಲ. ಚಹರೆ- 5 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಎರಡು ಮುಂಗೈನಲ್ಲಿ ಹಚ್ಚೆ ಇದೆ. ಹಸಿರು ರವಿಕೆ, ಸ್ಫಟಿಕ ಬಣ್ಣದ ಸೀರೆ ಧರಿಸಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2418306 ಸಂಪರ್ಕಿಸಲು ದೇವರಾಜ ಠಾಣೆ ಪೊಲೀಸರು ಕೋರಿದ್ದಾರೆ.
ನೀರು ಪಾಲು
ನಂಜನಗೂಡು: ಈಜಲು ಹೋದ ಇಬ್ಬರು ಯುವಕರು ನೀರು ಪಾಲಾದ ಘಟನೆ ಸುತ್ತೂರು ಗ್ರಾಮದಲ್ಲಿ ಭಾನುವಾರ ನಡೆದಿದೆ. ಮೈಸೂರು ತಾಲೂಕು ಆಯರಹಳ್ಳಿಯ ಶಿವಕುಮಾರ್ ಮತ್ತು ಸ್ವಾಮಿ ಮೃತಪಟ್ಟವರು. ಆರು ಮಂದಿ ಯುವಕರು ಬೈಕ್‌ನಲ್ಲಿ ಭಾನುವಾರ ಬೆಳಗ್ಗೆ ಸುತ್ತೂರಿಗೆ ಆಗಮಿಸಿ ಎಲ್ಲರೂ ಕಪಿಲಾ ನದಿಯಲ್ಲಿ ಈಜಲು ಹೋಗಿದ್ದಾರೆ. ಅವರಲ್ಲಿ ಇಬ್ಬರು ನೀರು ಪಾಲಾಗಿದ್ದು, ಶಿವಕುಮಾರ್ ಶವ ದೊರಕಿದೆ. ಸ್ವಾಮಿಯ ಶವಕ್ಕಾಗಿ ಶೋಧನೆ ಮುಂದುವರೆದಿದೆ. ಈ ಸಂಬಂಧ ಬದನವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರ ಸಾವು
ಹುಣಸೂರು: ಬೈಕ್‌ಗೆ ಮ್ಯಾಕ್ಸಿಕ್ಯಾಬ್ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಬಿಳಿಕೆರೆ ಸಮೀಪದ ಗೋಳನಹಳ್ಳಿಯಲ್ಲಿ ಭಾನುವಾರ ಸಂಜೆ ನಡೆದಿದೆ. ಮೈಸೂರು ತಾಲೂಕು ಇಲವಾಲ ನಿವಾಸಿಗಳಾದ ರಾಜೇಶ್ (28) ಮತ್ತು ರಾಜೇಂದ್ರ (25) ಮೃತಪಟ್ಟವರು. ಮೈಸೂರಿನಿಂದ ಕೆ.ಆರ್. ನಗರಕ್ಕೆ ತೆರಳುತ್ತಿದ್ದ ಮ್ಯಾಕ್ಸಿಕ್ಯಾಬ್ ಗೋಳನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿಯಾಗಿದ್ದು, ಬೈಕ್‌ನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement