ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೂಲ ಸೌಕರ್ಯ ವಂಚಿತ ಮಳವಳ್ಳಿ ಸಂತೆ

Vishwanath S
Updated On : 5 May 2014, 12:51 pm

ಮಳವಳ್ಳಿ: ಮಳೆಗಾಲದಲ್ಲಿ ಕೆಸರುಗದ್ದೆ, ಬೇಸಿಗೆಯಲ್ಲಿ ಧೂಳಿನ ಸಿಂಚನ, ಇಕ್ಕಟ್ಟಾದ ಜಾಗದಲ್ಲಿ ನಲುಗುವ ಗ್ರಾಹಕರು, ಇದು ಪಟ್ಟಣದ ಪುರಸಭೆ ಆವರಣದ ವಾರದ ಸಂತೆಯ ಚಿತ್ರಣ.
ಪಟ್ಟಣದ ಮಳವಳ್ಳಿ-ಬೆಂಗಳೂರು ರಾಜ್ಯ ಹೆದ್ದಾರಿ ರಸ್ತೆಯ ಸಂತೆ ಮಾರುಕಟ್ಟೆ ಸ್ವಚ್ಛತೆ ಕಾಣದ ಕಾರಣ ಪ್ಲಾಸ್ಟಿಕ್ ಚೀಲಗಳು, ಖಾಲಿ ಬಾಟಲ್ ರಾರಾಜಿಸುತ್ತಿದ್ದು ಜನ ಪರದಾಡುವಂತಾಗಿದೆ. ಸಂತೆಯಲ್ಲಿ ವ್ಯಾಪಾರಸ್ಥರಿಗೆ ನೆರಳಿನ ವ್ಯವಸ್ಥೆಯಿಲ್ಲ. ಗ್ರಾಹಕರ ಪರಿಸ್ಥಿತಿ ಇದಕ್ಕೆ ಹೊರತಾಗಿಲ್ಲ.
ನಿರ್ಲಕ್ಷ್ಯ: ವ್ಯಾಪಾರಿಗಳಿಂದ ಪ್ರತಿವಾರ ತೆರಿಗೆ ವಸೂಲಿಗೆ ತೋರುವ ಕಾಳಜಿಯನ್ನು ಮಾರುಕಟ್ಟೆ ಸ್ವಚ್ಛತೆಗೆ ಪುರಸಭೆ ಆಡಳಿತ ತೋರದಿರುವುದು ಇಲ್ಲಿನ ವ್ಯಾಪಾರಿಗಳ ಹಾಗೂ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ. ಮಾರುಕಟ್ಟೆಯೊಳಗೆ ತಗ್ಗು ದಿನ್ನೆಗಳು ನಿರ್ಮಾಣವಾಗಿದ್ದು ರಸ್ತೆ ನಿರ್ಮಾಣ ಮಾಡಲು ಪುರಸಭೆ ಮುಂದಾಗಿಲ್ಲ.
ಬಿಡಾಡಿ ದನಗಳ ಕಾಟ: ಸಂತೆ ಮಧ್ಯೆ ನುಗ್ಗುವ ಹಂದಿಗಳು, ಬಿಡಾಡಿ ದನಗಳ ಕಾಟಕ್ಕೆ ವ್ಯಾಪಾರಿಗಳು ರೋಸಿ ಹೋಗಿದ್ದಾರೆ. ದುಬಾರಿ ಬೆಲೆಯ ತರಕಾರಿಯನ್ನು ಕ್ಷಣದಲ್ಲೇ ಬಾಯಿ ತುಂಬಿಸಿಕೊಳ್ಳುವ ಬಿಡಾಡಿ ದನಗಳು ವ್ಯಾಪಾರಿಗಳ ಲಾಭ ಕಿತ್ತುಕೊಳ್ಳುತ್ತಿವೆ.
ಮಳವಳ್ಳಿಯ ಸಂತೆಗೆ ಶತಮಾನದ ಇತಿಹಾಸವಿದೆ. ಸಂತೆಯಲ್ಲಿ ಮೂಲಸೌಕರ್ಯಗಳಿಲ್ಲದೆ ಅವ್ಯವಸ್ಥೆಯ ಆಗರವಾಗಿದ್ದು, ವ್ಯಾಪಾರಿಗಳು ಮತ್ತು ಗ್ರಾಹಕರು ಗೋಳಿಡುವಂತಾಗಿದೆ.
ಶೌಚಾಲಯದ ವ್ಯವಸ್ಥೆ ಇಲ್ಲ: ಸಂತೆಯಲ್ಲಿ ಮಹಿಳೆಯರೂ ಅಧಿಕವಾಗಿರುತ್ತಾರೆ. ದೂರದ ಪ್ರದೇಶಕ್ಕೆ ಶೌಚಾಲಯಕ್ಕೆ ತೆರಳುವ ಮಹಿಳೆಯರಿಗೆ ಯಾವುದೇ ಭದ್ರತೆಯೂ ಇಲ್ಲ.
ಸಂತೆಯಿಂದ ಬಂದ ಆದಾಯವನ್ನು ಮಾತ್ರ ವ್ಯಾಪಾರಿಗಳಿಂದ ಪಡೆಯುವ ಪುರಸಭೆ, ರೈತರು ಮತ್ತು ವ್ಯಾಪಾರಿಗಳಿಗೆ ಸುಸಜ್ಜಿತ ಸಂತೆಮಾಳ ನಿರ್ಮಿಸಿಕೊಡುವಲ್ಲಿ ನಿರ್ಲಕ್ಷ್ಯ ಭಾವ ಹೊಂದಿದೆ.
ಜಿಲ್ಲೆಯಲ್ಲಿಯೇ ಹೆಸರುವಾಸಿಯಾಗಿರುವ ಮಳವಳ್ಳಿ ಸಂತೆಗೆ ತಾಲೂಕಿನ ಸುತ್ತಮುತ್ತಲ ಗ್ರಾಮಸ್ಥರು ಆಗಮಿಸುತ್ತಿದ್ದು ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಸಂತೆ ಮೈದಾನದಲ್ಲಿ ಸುಸಜ್ಜಿತವಾದ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ, ಪಾರ್ಕಿಂಗ್ ನಿರ್ಮಾಣಕ್ಕೆ ಕ್ರಮ ವಹಿಸಬೇಕಾಗಿದೆ.
ಮಳವಳ್ಳಿ ಸಂತೆ ಮೈದಾನಕ್ಕೆ ಮೇಲ್ಛಾವಣಿ ನಿರ್ಮಿಸಬೇಕು ಹಾಗೂ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ ಒದಗಿಸಬೇಕು.
-  ಪ್ರಸನ್ನ, ಮಾರೇಹಳ್ಳಿ
ಮಳವಳ್ಳಿ ಸಂತೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸಾರ್ವಜನಿಕರು ತರಕಾರಿ ಹಾಗೂ ಎಲ್ಲಾ ರೀತಿಯ ಸಾಮಾನುಗಳನ್ನು ಕೊಳ್ಳಲು ಬರುವುದರಿಂದ ಸಂತೆಯನ್ನು ಅಭಿವೃದ್ಧಿ ಪಡಿಸಬೇಕಾಗಿದೆ.
-  ಟಿ.ಪಿ. ಕರಿಯಪ್ಪ, ಕೋಟೆ, ಮಳವಳ್ಳಿ


-ಎಂ.ಡಿ. ಉಮೇಶ್ ಮಳವಳ್ಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement