ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಯಶಸ್ವಿನಿ ಗುರಿ 30 ಲಕ್ಷ

Vishwanath S
Updated On : 5 May 2014, 12:51 pm

ಕ.ಪ್ರ.ವಾರ್ತೆ , ಮೈಸೂರು , ಮೇ 4
ಗ್ರಾಮೀಣ ಸಹಕಾರಿ ಕ್ಷೇತ್ರಕ್ಕೆ ಮೀಸಲಾಗಿದ್ದ ಯಶಸ್ವಿನಿ ಯೋಜನೆಯನ್ನು ಸರ್ಕಾರ ನಗರ ಪ್ರದೇಶಕ್ಕೂ ವಿಸ್ತರಿಸಿರುವ ಹಿನ್ನೆಲೆಯಲ್ಲಿ ಸಹಕಾರ ಇಲಾಖೆಯು, 2014-15ನೇ ಸಾಲಿಗೆ ಕನಿಷ್ಠ 30 ಲಕ್ಷ ಫಲಾನುಭವಿಗಳನ್ನು ನೋಂದಾಯಿಸಲು ತನ್ನ ಪ್ರಾಂತ ಮತ್ತು ಜಿಲ್ಲಾ ಕಚೇರಿಗೆ ಸೂಚಿಸಿದೆ.
ಯಶಸ್ವಿನಿ ನಗರ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯನ್ನು 2014-15ನೇ ಸಾಲಿನಿಂದ ರಾಜ್ಯದ ನಗರ ಸಹಕಾರಿಗಳು ಮತ್ತು ಅವರ ಕುಟುಂಬ ವರ್ಗದವರಿಗೆ ಉತ್ತಮ ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಒದಗಿಸಲು ಕರ್ನಾಟಕ ಸರ್ಕಾರ ಜಾರಿಗೊಳಿಸುತ್ತಿರುವ ಒಂದು ಸ್ವಯಂ ನಿಧಿ ಯೋಜನೆ ಇದಾಗಿದೆ. ಈ ಯೋಜನೆಯಡಿ ವಾರ್ಷಿಕ ವಂತಿಗೆಯನ್ನು ಪ್ರತಿಯೊಬ್ಬ ಸದಸ್ಯರಿಗೆ 1010, ಪ.ಜಾತಿ, ಪ.ಪಂಗಡದ ಸಹಕಾರಿ ಸದಸ್ಯರಿಗೆ 810ನ್ನು ವಂತಿಗೆಯಾಗಿ ನಿಗದಿಪಡಿಸಲಾಗಿದೆ. ಒಂದು ಕುಟುಂಬದಲ್ಲಿ ಐವರು ಅಥವಾ ಅದಕ್ಕಿಂತ ಹೆಚ್ಚಿಗೆ ಕುಟುಂಬ ಸದಸ್ಯರನ್ನು ಈ ಯೋಜನೆಯಡಿ ನೋಂದಾಯಿಸಿದ್ದಲ್ಲಿ ಅವರು ಪಾವತಿಸಬೇಕಾದ ವಂತಿಗೆ ಹಣದಲ್ಲಿ ಶೇ.15ರಷ್ಟು ರಿಯಾಯಿತಿ ಕಲ್ಪಿಸಲಾಗಿದೆ.
ರಾಜ್ಯದ ನಗರ ಪ್ರದೇಶದ ಸಹಕಾರ ಸಂಘಗಳ ಸದಸ್ಯರ ಸಂಖ್ಯೆಯು ಅಂದಾಜು 75.65 ಲಕ್ಷಕ್ಕಿಂತ ಹೆಚ್ಚು ಇರುವುದನ್ನು ಗಮನಿಸಿ, 2014-15ನೇ ಸಾಲಿಗೆ ಕನಿಷ್ಠ 30 ಲಕ್ಷ ಸದಸ್ಯರನ್ನು ನೋಂದಾಯಿಸುವ ಗುರಿಯನ್ನು ಇಲಾಖೆ ನೀಡಿದೆ. 2014-15ನೇ ಸಾಲಿಗೆ ಯಶಸ್ವಿನಿ ನಗರ ಆರೋಗ್ಯ ರಕ್ಷಣಾ ಯೋಜನೆಯಡಿ ಸದಸ್ಯರ ನೋಂದಾಯಿಸುವ ಪ್ರಕ್ರಿಯೆ ಕಳೆದ ಮಾ.15ರಿಂದ ಆರಂಭವಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಪ್ರತಿ ಜಿಲ್ಲೆಗೆ ಪ್ರತ್ಯೇಕ ಗುರಿ ನಿಗದಿಗೊಳಿಸಲಾಗಿದೆ. ಅದರಂತೆ ಎಲ್ಲಾ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು, ವೈಯಕ್ತಿಕ ಗಮನಹರಿಸಿ, ಹೆಚ್ಚಿನ ಪ್ರಗತಿ ಸಾಧಿಸಲು ಯೋಜನೆ ರೂಪಿಸಿ, ಪ್ರತಿ ಶನಿವಾರ ಸಾಪ್ತಾಹಿಕ ಮಾಹಿತಿಯನ್ನು ಸಂಬಂಧಿಸಿದ ಪ್ರಾಂತೀಯ ಸಹಕಾರ ಸಂಘಗಳ ಜಂಟಿ ನಿಬಂಧಕರಿಗೆ ಸಲ್ಲಿಸಬೇಕು. ಪ್ರಾಂತೀಯ ಜಂಟಿ ನಿಬಂಧಕರು ಸಂಬಂಧಿಸಿದ ಪ್ರಾಂತೀಯ ಪ್ರಗತಿಯನ್ನು ಯಶಸ್ವಿನಿ ಟ್ರಸ್ಟಿಗೂ ಮತ್ತು ಸಹಕಾರ ಸಂಘಗಳ ನಿಬಂಧಕರ ಕಚೇರಿಗೂ ಸಲ್ಲಿಸಬೇಕು. ಅಲ್ಲದೆ ಪ್ರತಿ ತಿಂಗಳು ಜಿಲ್ಲಾ ಮಟ್ಟದ ಸಭೆ ನಡೆಸಿ, ವರದಿ ನೀಡಬೇಕು ಎಂದು ಇಲಾಖೆಯ ಸಹಕಾರ ಸಂಘಗಳ ನಿಬಂಧಕ ಡಾ.ಎನ್.ಎಸ್. ಚನ್ನಪ್ಪಗೌಡ ಸೂಚಿಸಿದ್ದಾರೆ.
ಯಾರು ಅರ್ಹರು?
ಈ ಯೋಜನೆಯಡಿ ನಗರ ಸಹಕಾರಿಗಳನ್ನು ಮನವೊಲಿಸಿ ಸ್ವಪ್ರೇರಣೆಯಿಂದ ಸದಸ್ಯರನ್ನಾಗಿ ಮಾಡಲು ಕ್ರಮ ಕೈಗೊಳ್ಳಬೇಕು. ಯಾವುದೇ ರೀತಿಯ ಕಡ್ಡಾಯ ಅಥವಾ ಒತ್ತಡ ಇರಬಾರದು. ಪ್ರಧಾನ ಅರ್ಜಿದಾರರು ಮತ್ತು ಅವರ ಕುಟುಂಬದ ಯಾವುದೇ ಸದಸ್ಯನು ಸರ್ಕಾರಿ ನೌಕರನಾಗಿ ಅಥವಾ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬೇರೆ ಯಾವುದೇ ಆರೋಗ್ಯ ವಿಮಾ ಸೌಲಭ್ಯಕ್ಕೆ ಅರ್ಹನಾದಲ್ಲಿ ಅಂತಹವರನ್ನು ಈ ಯೋಜನೆಯಡಿ ನೋಂದಾಯಿಸಬಾರದು.
ಪ್ರಾಂತವಾರು ಯೋಜನೆ ಫಲಾನುಭವಿಗಳ ನೋಂದಣಿ ಗುರಿ
ಪ್ರಾಂತ    ಸದಸ್ಯರ ಸಂಖ್ಯೆ    ಗುರಿ
ಬೆಂಗಳೂರು ಪ್ರಾಂತ    29,99,339    1,19,200
ಮೈಸೂರು ಪ್ರಾಂತ    9,43,453    37,150
ಬೆಳಗಾವಿ ಪ್ರಾಂತ    32,37,292    1,28,350
ಗುಲ್ಬರ್ಗ ಪ್ರಾಂತ    3,87,023    15,300
ಒಟ್ಟು    75,67,107    30,00,000


-ಡಿ.ಎನ್. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement