ಲಲಿತಮಹಲ್ ಕ್ರೀಡಾಂಗಣವಾಗಿ ಅಭಿವೃದ್ಧಿಪಡಿಸಿ
ಕ.ಪ್ರ.ವಾರ್ತೆ , ಮೈಸೂರು , ಮೇ 4
ಲಲಿತಮಹಲ್ ಎದುರಿನ ಮೈದಾನವು ಸರ್ಕಾರದ ವಶದಲ್ಲಿದ್ದು, ಇದನ್ನು ಕ್ರೀಡಾಂಗಣವಾಗಿ ಅಭಿವೃದ್ಧಿಪಡಿಸಿ ಜೈ ಭೀಮ್ ಕ್ರೀಡಾಂಗಣ ಎಂದು ನಾಮಕರಣ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪತ್ರಿಕೋದ್ಯಮಿ ರಾಜಶೇಖರ ಕೋಟಿ ಮನವಿ ಮಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರ 123ನೇ ಜನ್ಮದಿನದ ಅಂಗವಾಗಿ ಶಿವಮಹದೇವ ಮತ್ತು ಗೆಳೆಯರ ಬಳಗ ಲಲಿತಮಹಲ್ ಮೈದಾನದಲ್ಲಿ ಆಯೋಜಿಸಿರುವ 3ನೇ ವರ್ಷದ ರಾಜ್ಯಮಟ್ಟದ ಜೈ ಭೀಮ್ ಕಪ್ 2014 ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ಕ್ರೀಡಾಂಗಣ ಇಲ್ಲದೆ ಇರುವುದರಿಂದ ನಗರ ಪಾಲಿಕೆ ಮತ್ತು ಎಂಡಿಎ ಈ ಜಾಗವನ್ನು ಕ್ರಿಕೆಟ್ಗೆ ಅನುಕೂಲ ಆಗುವಂತೆ ಕ್ರೀಡಾಂಗಣ ಅಭಿವೃದ್ಧಿಪಡಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಅವರು ಮನಸ್ಸು ಮಾಡಿದರೆ, ಇದನ್ನು ಉತ್ತಮ ಕ್ರೀಡಾಂಗಣವಾಗಿ ನಿರ್ಮಿಸುವುದು ಕಷ್ಟವಲ್ಲ ಎಂದರು.
ಬ್ಯಾಟ್ ಮಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ರಾಜ್ಯ ಮಟ್ಟದಲ್ಲಿ ಜೈ ಭೀಮ್ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು 3 ವರ್ಷಗಳಿಂದ ಆಯೋಜಿಸುತ್ತಿರುವುದು ಶ್ಲಾಘನೀಯ. ಕ್ರೀಡೆ ಆರೋಗ್ಯಕ್ಕೆ ಮಾತ್ರವಲ್ಲದೆ, ಶಿಕ್ಷಣಕ್ಕೂ ಪೂರಕವಾಗಿದೆ ಎಂದರು.
ಉದ್ಘಾಟನಾ ಪಂದ್ಯವು ನಗರದ ಎಫ್ಸಿಸಿ ಹಾಗೂ ಜೈ ಭೀಮ್ ಕ್ರಿಕೆಟರ್ಸ್ ತಂಡಗಳ ನಡುವೆ ನಡೆಯಿತು. ಒಂದು ವಾರಗಳ ಕಾಲ ಪಂದ್ಯಾವಳಿ ನಡೆಯಲಿದೆ. ಉಪ ಮೇಯರ್ ವಿ. ಶೈಲೇಂದ್ರ, ಪಾಲಿಕೆ ಸದಸ್ಯರಾದ ಅನಂತು, ಬಿ.ಎಂ.ನಟರಾಜು, ಹೊಸಹುಂಡಿ ಗ್ರಾಪಂ ಅಧ್ಯಕ್ಷ ಬಸವರಾಜು, ಸಮಾಜ ಸೇವಕರಾದ ಜಿ.ಎನ್. ದೇವದತ್ತ, ಎಂ. ಅನ್ವರ್ಜೀ, ಸೋಮಣ್ಣ, ಜೆಡಿಎಸ್ ಮುಖಂಡ ಮಾದೇಗೌಡ, ಟೆನಿಸ್ ಕ್ರೀಡಾಪಟು ತುಳಸಿರಾಮ್, ಸರ್ವಜನಾಂಗ ಹಿತರಕ್ಷಣಾ ಸಮಿತಿ ಅಧ್ಯಕ್ಷ ವೇಣುಗೋಪಾಲ್ ಇದ್ದರು.