ಆಸ್ತಿ ತೆರಿಗೆ ಪಾವತಿಗೆ ರಿಯಾಯ್ತಿ ನೀಡಿ
ಮೈಸೂರು: ಲೋಕಸಭಾ ಚುನಾವಣೆಯಿಂದಾಗಿ ಸಾರ್ವಜನಿಕರು ಕಂದಾಯ ಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಂದು ತಿಂಗಳ ಕಾಲ ಸಾರ್ವಜನಿಕರ ಆಸ್ತಿ ತೆರಿಗೆಯಲ್ಲಿ ಶೇ.5ರಷ್ಟು ರಿಯಾಯಿತಿ ನೀಡಬೇಕು ಎಂದು ನಗರ ಪಾಲಿಕೆಯ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಲ್. ಭೈರಪ್ಪ ಮನವಿ ಮಾಡಿದರು.
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಚುನಾವಣೆಯಿಂದಾಗಿ ಸಾರ್ವಜನಿಕರು ಕಂದಾಯ ಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಒಂದು ತಿಂಗಳು ಆಸ್ತಿ ತೆರಿಗೆ ಪಾವತಿಸಲು ಶೇ.5ರಷ್ಟು ರಿಯಾಯಿತಿ ನೀಡಿದೆ. ಅಂತೆಯೆ ಮೈಸೂರು ನಗರ ಪಾಲಿಕೆ ವ್ಯಾಪ್ತಿಗೂ ಈ ರಿಯಾಯಿತಿ ನೀಡಬೇಕು. ಈ ಸಂಬಂಧ ನಗರ ಪಾಲಿಕೆ ಆಯುಕ್ತರ ಮೂಲಕ ಮತ್ತು ಸಮಿತಿ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾರ್ವಜನಿಕರು ಕೇವಲ 10 ದಿನಗಳಲ್ಲಿಯೆ ಶೇ.26ರಷ್ಟು ತೆರಿಗೆ ಪಾವತಿಸಿದ್ದಾರೆ. ಉಳಿಕೆ 25 ಕೋಟಿಯಷ್ಟು ತೆರಿಗೆಯನ್ನು ಪಾವತಿಸುವ ವಿಶ್ವಾಸ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಅನುಮತಿ ನೀಡಬೇಕು ಎಂದರು.
ಕಂದಾಯ ಬಡಾವಣೆಯಲ್ಲಿ ವಾಸಿಸುವ ನಿವಾಸಿಗಳು ಕೂಡಲೇ ತಮ್ಮ ಆಸ್ತಿಗೆ ಸಂಬಂಧಿಸಿದ ದಾಖಲೆ, ನಿವೇಶನ ಅಥವಾ ಮನೆಯ ಅಳತೆಯನ್ನು ಪಾಲಿಕೆಗೆ ನೀಡಬೇಕು. ಪಾಲಿಕೆಯಲ್ಲಿ ಬಿ ಕಡತ ತೆಗೆದು ಕಂದಾಯ ಬಡಾವಣೆಯ ಆಸ್ತಿಯನ್ನು ಗಣಕೀಕರಿಸುವ ಕೆಲಸ ನಡೆಯುತ್ತಿದೆ.
ಮುಂದೆ ಸರ್ಕಾರ ಅಕ್ರಮ- ಸಕ್ರಮ ಜಾರಿಗೊಳಿಸಿದರೆ ಕಂದಾಯ ಬಡಾವಣೆ ನಿವಾಸಿಗಳಿಗೆ ಅನುಕೂಲವಾಗುತ್ತದೆ. ಒಂದು ವೇಳೆ ಸರ್ಕಾರ ಕಡಿಮೆ ಕಾಲಾವಕಾಶ ನೀಡಿದರೆ ಕಂದಾಯ ಬಡಾವಣೆ ನಿವಾಸಿಗಳಿಗೆ ತೊಂದರೆ ತಪ್ಪಿದ್ದಲ್ಲ. ಆದ್ದರಿಂದ ಈಗಲೇ ತಮ್ಮ ಆಸ್ತಿಗೆ ಸಂಬಂಧಿಸಿದ ದಾಖಲೆ ಸಲ್ಲಿಸಬೇಕು ಎಂದರು.
ಆಸ್ತಿ ತೆರಿಗೆ ಇನ್ನೂ ಆನ್ಲೈನ್: ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಬಡಾವಣೆಯ ಆಸ್ತಿಯ ದಾಖಲಾತಿಯನ್ನು ಗಣಕೀಕರಣಗೊಳಿಸಲಾಗುತ್ತಿದೆ.
ಅಂತೆಯೇ ಕಂದಾಯ ಬಡಾವಣೆಯ ಆಸ್ತಿ ದಾಖಲಾತಿಯೂ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಎರಡು ತಿಂಗಳಲ್ಲಿ ಆನ್ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಸುವ ವ್ಯವಸ್ಥೆ ಜಾರಿಯಾಗಲಿದೆ ಎಂದರು. ಸಮಿತಿ ಸದಸ್ಯರಾದ ಬಿ.ವಿ. ಮಂಜುನಾಥ್, ಕೆ.ಸಿ. ಶೌಕತ್ ಪಾಷ ಇದ್ದರು.