ಗುರುವಿಗೆ ಅಕ್ಕರೆ ಬೀಳ್ಕೊಡುಗೆ
ಮೈಸೂರು: ಮೈಸೂರು ವಿವಿ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಡಾ.ಕೆ.ಜೆ. ಜೋಸೆಫ್ ಹಾಗೂ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ವಿಭಾಗದ ಹಿರಿಯ ವಿದ್ಯಾರ್ಥಿ ಕೆ. ಶಿವಕುಮಾರ್ ಅವರನ್ನು ವಿಭಾಗದ ವತಿಯಿಂದ ಸೋಮವಾರ ಸನ್ಮಾನಿಸಲಾಯಿತು.
ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಜೋಸೆಫ್, 1975ರಲ್ಲಿ ಶಿಕ್ಷಣ ಪಡೆಯಲು ಕೊಡಗಿನಿಂದ ಮೈಸೂರಿಗೆ ಬಂದೆ. ಇಲ್ಲಿನ ಮಹಾರಾಜ ಕಾಲೇಜು ಹಾಗೂ ಮಾನಸಗಂಗೋತ್ರಿ ನನಗೆ ಜ್ಞಾನಾರ್ಜನೆ ಮಾಡಿದ ಪವಿತ್ರ ಸ್ಥಳಗಳು. ನಂತರ ಇಲ್ಲಿಯೇ ವೃತ್ತಿ ಜೀವನ ಆರಂಭಿಸಿದ ನಾನು 32 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದೆ. ವೃತ್ತಿ ಬದುಕಿನಲ್ಲಿ ಒಟ್ಟು 33 ತಂಡಗಳಿಗೆ ಪಾಠ ಮಾಡಿದ್ದೇನೆ. ಹಲವು ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಬೆಳೆದಿರುವುದು ಸಾರ್ಥಕ್ಯ ತಂದುಕೊಟ್ಟಿದೆ ಎಂದರು.
ನಮ್ಮೂರು ಕುಗ್ರಾಮವಾಗಿತ್ತು. ನಮಗೆ ಜಮೀನಿದ್ದರು ಸಹ ಅಷ್ಟಾಗಿ ಆದಾಯ ಬರುತ್ತಿರಲಿಲ್ಲ. ನಮ್ಮಪ್ಪ ಹಸು, ಕರು ಮಾರಿ, ಅದರಿಂದ ಬಂದ ಹಣವನ್ನು ನನ್ನ ಕೈಯಲ್ಲಿಟ್ಟು ಮೈಸೂರಿಗೆ ಕಳುಹಿಸಿದರು. ಅಂತಹ ಕಷ್ಟದ ಪರಿಸ್ಥಿತಿಯಿಂದ ಬಂದವನಾದ ನನಗೆ ಎಲ್ಲವನ್ನೂ ಜೀರ್ಣಿಸಿಕೊಳ್ಳುವ ಶಕ್ತಿ ಇದೆ. ನಿವೃತ್ತಿಯಾದೆವು ಎಂದು ಕೆಲವರು ಆತ್ಮಹತ್ಯೆ ಮಾಡಿಕೊಂಡವರು ಇದ್ದಾರೆ. ಆದರೆ, ನಾನು ಮಾತ್ರ ನಿವೃತ್ತಿಯನ್ನು ವಯೋಸಹಜ ಎಂದು ಭಾವಿಸಿದ್ದೇನೆ. ಮೈಸೂರು ವಿವಿಯೊಂದಿಗಿನ ಆಡಳಿತಾತ್ಮಕತೆ ಕಳೆದಿದೆಯೇ ಹೊರತು, ಸಂಬಂಧ ಹಾಗೆ ಉಳಿದಿದೆ ಎಂದರು.
ಮತ್ತೊಬ್ಬ ಸನ್ಮಾನಿತರಾದ ಕೆ. ಶಿವಕುಮಾರ್ ಮಾತನಾಡಿ, ಬೇರೆ ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು ಬೇಗೆ ಕೆಲಸ ಪಡೆಯುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ಪತ್ರಿಕೋದ್ಯಮ ಮುಗಿಸಿದವರಿಗೆ ಕೆಲಸ ಬೇಗ ಸಿಗುತ್ತದೆ. ಪತ್ರಿಕೋದ್ಯಮ ದೊಡ್ಡದಾಗಿ ಬೆಳೆದಿದ್ದು ಯಾರು ಬದ್ಧತೆಯಿಂದ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಾರೆ ಅವರಿಗೆ ಕೆಲಸ ಸಿಗುತ್ತದೆ. ಸಿಕ್ಕ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿದರೆ ಪತ್ರಿಕೋದ್ಯಮದಲ್ಲಿ ಹೆಚ್ಚು ಕಾಲ ಉಳಿಯಬಹುದು ಎಂದರು.
ಮಹಾರಾಜ ಕಾಲೇಜು ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕ ಆರ್.ಎನ್. ಪದ್ಮನಾಭ ಮಾತನಾಡಿ, ಜೋಸೆಫ್ ಹಾಗೂ ಶಿವಕುಮಾರ್ ನನ್ನ ವಿದ್ಯಾರ್ಥಿಗಳು. ಇಂದು ಪತ್ರಿಕೋದ್ಯಮ ವೇಗವಾಗಿ ಬೆಳೆಯುತ್ತಿದ್ದರು ಸಹ ಕೆಟ್ಟ ಅಪವಾದವನ್ನು ಮಡಿಲಿನಲ್ಲಿ ಕಟ್ಟಿಕೊಂಡು ಬರುತ್ತಿದೆ. ಆದ್ದರಿಂದ ಹೊಸದಾಗಿ ಕ್ಷೇತ್ರ ಪ್ರವೇಶಿಸುವವರು ಎಚ್ಚರಿಕೆಯಿಂದ ತಮ್ಮ ವ್ಯಕ್ತಿತ್ವಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ನಿರ್ವಹಿಸುವಂತೆ ಕಿವಿಮಾತು ಹೇಳಿದರು.
ಸಂವಹನ ಮತ್ತು ಪತ್ರಿಕೋದ್ಯಮ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಪಿ. ಮಹೇಶಚಂದ್ರ ಗುರು ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಡಾ.ಸಿ.ಕೆ. ಪುಟ್ಟಸ್ವಾಮಿ, ಡಾ.ಎನ್. ಮಮತಾ ಇದ್ದರು.