ಭಾರಿ ಮಳೆಯಿಂದ 10 ಕೋಟಿ ನಷ್ಟ
ಎಚ್.ಡಿ. ಕೋಟೆ: ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಸುರಿದ ಆಲಿಕಲ್ಲು ಮಳೆಯಿಂದ ಸುಮಾರು 10 ಕೋಟಿ ನಷ್ಟ ಸಂಭವಿಸಿದ್ದು, ಸರ್ಕಾರವು ಕೂಡಲೇ ರೈತರ ನೆರವಿಗೆ ಬರುವಂತೆ ಶಾಸಕ ಎಸ್. ಚಿಕ್ಕಮಾದು ಒತ್ತಾಯಿಸಿದ್ದಾರೆ.
ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿ ನಂತರ ಮಾತನಾಡಿದ ಅವರು, ಮೇ 3ರಂದು ತಾಲೂಕು ಹಂಪಾಪುರ ಹೋಬಳಿಯಲ್ಲಿ ಸುರಿದ ಆಲಿಕಲ್ಲು ಮಳೆಯಿಂದ ಅಪಾರ ಹಾನಿಯಾಗಿರುತ್ತದೆ. ರೈತರು ತಮ್ಮ ಜಮೀನಿಗೆ ಬಿತ್ತಿರುವ ಹತ್ತಿ, ಶುಂಠಿ, ಅರಿಶಿನ ಸೇರಿದಂತೆ ಬಿತ್ತನೆಯ ಕೊಚ್ಚಿ ಹೋಗಿದೆ.
ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಕಸಬಾ ಹೋಬಳಿಯ ಸವ್ವೆ, ಚಕ್ಕೋಡನಹಳ್ಳಿ, ಅಣ್ಣೂರು, ಭೀಮನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕೆ.ಜಿ. ಹುಂಡಿ, ಬೋಚಿಕಟ್ಟೆ, ಟೈಗರ್ ಬ್ಲಾಕ್, ಸವ್ವೆ ಪ್ರದೇಶದಲ್ಲಿ ಅಪಾರವಾಗಿ ಹಾನಿ ಉಂಟಾಗಿದ್ದು, ಕೋಣೆಗೌಡನಹುಂಡಿ ಗ್ರಾಮದ ಪಿಚ್ಚಿಮುತ್ತು, ಮರಿಲಿಂಗನಾಯಕ ಅವರ ಸುಮಾರು 150 ತೆಂಗಿನ ಮರಗಳು ನೆಲಕ್ಕುರುಳಿವೆ. ಹಲವು ಮನೆಗಳ ಮೇಲೆ ಬಿದ್ದಿವೆ ಎಂದರು.
ಮರಗಳು ಬಿದ್ದ ಪರಿಣಾಮ ಗ್ರಾಮದ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತವಾಗಿದ್ದು, ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗದ ಹಾಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಮಳೆ ಆಧಾರಿತ ಪ್ರದೇಶಕ್ಕೆ 15 ಸಾವಿರ, ನೀರು ಆಶ್ರಿತ ಬೆಳೆಗಳಿಗೆ 25ರಿಂದ 45 ಸಾವಿರ ಪರಿಹಾರವನ್ನು ಕೂಡಲೇ ಸರ್ಕಾರವು ಬಿಡುಗಡೆ ಮಾಡುವಂತೆ ಅವರು ಆಗ್ರಹಿಸಿದರು.
ಈಗಾಗಲೇ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಪ್ರವಾಸವನ್ನು ನಡೆಸಿದ್ದು, ಮಳೆಯ ಹಾನಿಯ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಶೀಘ್ರವಾಗಿ ನೀಡುವಂತೆ ಸೂಚಿಸಲಾಗಿದೆ. ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿದಾಗ ತಾಪಂ ಸದಸ್ಯ ಸುಂದರನಾಯಕ, ಎಂ.ಸಿ. ದೊಡ್ಡನಾಯಕ, ಚಾ. ನಂಜುಂಡಮೂರ್ತಿ, ನರಸಿಂಹೇಗೌಡ, ನಾಗರಾಜು, ನಾಗರಾಜು, ಬೂದನೂರು ನಾಗರಾಜಪ್ಪ ಸೇರಿದಂತೆ ಕಸಬಾ ಆರ್‌ಐ ರವಿಚಂದ್ರ, ಜಿಪಂ ತಾಂತ್ರಿಕ ಉಪವಿಭಾಗದ ನಾಗರಾಜು, ಸೆಸ್ಕ್ ಎಇಇ ರಾಮಸ್ವಾಮಿ, ತಾರಕ ಉಪನಾಲಾ ವಿಭಾಗದ ಎಇಇ ಅಚ್ಚುತ್, ಗ್ರಾಪಂ ಅಧಿಕಾರಿಗಳು ಇದ್ದರು.
ಅಂತರಸಂತೆ ಭಾರಿ ಹಾನಿ
ಅಂತರಸಂತೆ: ಎಚ್.ಡಿ. ಕೋಟೆ ತಾಲೂಕು ಅಂತರಸಂತೆ ಹೋಬಳಿಯಾದ್ಯಂತ ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ, ಬಿತ್ತನೆ ಮಾಡಿದ್ದ ಹತ್ತಿ ಬೀಜಗಳು ಕೊಚ್ಚಿ ಹೋಗಿದ್ದು, ಲಕ್ಷಾಂತರ ರು. ನಷ್ಟ ಸಂಭವಿಸಿರುವುದರಿಂದ, ರೈತರು ಅತಂತ್ರರಾಗಿದ್ದಾರೆ.
ಪಶ್ಚಿಮ ಘಟ್ಟ ಅರಣ್ಯ ವಲಯ ಇಲಾಖೆಯಿಂದ ರೈತರ ಜಮೀನಿಗೆ ಬದುವು ನಿರ್ಮಿಸಿಕೊಟ್ಟಿದ್ದು, ಈಗ ಮಳೆಯಿಂದ ಮಣ್ಣು ಕುಸಿದ ಪರಿಣಾಮ ಸಮತಟ್ಟಾಗಿದೆ. ಹಾಗೂ ಗ್ರಾಮದ ಒಳಗಡೆ ಚರಂಡಿ ನೀರು ಭಾರಿ ಪ್ರಮಾಣದಲ್ಲಿ ಹರಿದ ಪರಿಣಾಮ ರಸ್ತೆಗಳು ಗುಂಡಿ ಬಿದ್ದಿವೆ. ಮತ್ತು ಎಂ.ಎಂ. ರಸ್ತೆಯಲ್ಲಿ ಮಣಿ ಎಂಬವವರ ಅಂಗಡಿ ಮುರಿದು ಚೆಲ್ಲಾಪಿಲ್ಲಿಯಾಗಿದೆ. ನೂರಲಕುಪ್ಪೆ ಬಿ ಗ್ರಾಮದ ದಿವಗಂತ ಕೆ.ಎಂ. ದೊಡ್ಡಯ್ಯ ಅವರ ಪತ್ನಿ ಚಿನ್ನಮ್ಮನವರಿಗೆ ಸೇರಿದ ಮಂಗಳೂರು ಹಂಚಿನ ಮನೆ ಗೋಡೆಗಳು ಹಾಗೂ ಹೆಂಚುಗಳು ಕುಸಿದು ಬಿದ್ದಿವೆ. ರಸ್ತೆಯುದ್ದಕ್ಕೂ ಹಲವಾರು ಮರದ ರೆಂಬೆಗಳು ಮುರಿದು ಬಿದ್ದಿದೆ. ಅಂತರಸಂತೆ ಸತ್ತಿಗೆಹುಂಡಿ, ಹುಣಸೇಕುಪ್ಪೆ, ಹೊಸಮಾಳ, ಸೋಗಹಳ್ಳಿ, ನೂರಲಕುಪ್ಪೆ ಎ ಮತ್ತು ಬಿ, ಬದನೆಕುಪ್ಪೆ, ಕೆಂಪೇಗೌಡನಹುಂಡಿ ಮುಂತಾದ ಹಲವಾರು ಗ್ರಾಮಗಳಲ್ಲಿ ಮಳೆ ಗಾಳಿಯಿಂದ ನಷ್ಟ ಸಂಭವಿಸಿದ್ದು. ರೈತರಿಗೆ ಆಗಿರುವ ನಷ್ಟವನ್ನು ಸರ್ಕಾರ ಪರಿಶೀಲಿಸಿ, ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ಎಚ್.ಡಿ. ಕೋಟೆ ತಾಲೂಕು ಬಿಜೆಪಿ ರೈತ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಂ. ಮಹದೇವಪ್ಪ ಒತ್ತಾಯಿಸಿದ್ದಾರೆ.
ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಕಸಬಾ ಹೋಬಳಿಯ ಸವ್ವೆ, ಚಕ್ಕೋಡನಹಳ್ಳಿ, ಅಣ್ಣೂರು, ಭೀಮನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕೆ.ಜಿ. ಹುಂಡಿ, ಬೋಚಿಕಟ್ಟೆ, ಟೈಗರ್ ಬ್ಲಾಕ್, ಸವ್ವೆ ಪ್ರದೇಶದಲ್ಲಿ ಅಪಾರವಾಗಿ ಹಾನಿ ಉಂಟಾಗಿದ್ದು, ಕೋಣೆಗೌಡನಹುಂಡಿ ಗ್ರಾಮದ ಪಿಚ್ಚಿಮುತ್ತು, ಮರಿಲಿಂಗನಾಯಕ ಅವರ ಸುಮಾರು 150 ತೆಂಗಿನ ಮರಗಳು ಸುಮಾರು ಮರಗಳು ನೆಲಕ್ಕುರುಳಿದೆ. ಹಲವು ಮನೆಗಳ ಮೇಲೆ ಮರಗಳು ಬಿದ್ದಿದ್ದರೆ, ಮತ್ತೆ ಕೆಲವು ಚಾವಣಿಯು ಗಾಳಿಗೆ ಹಾರಿ ಹೋಗಿದೆ
- ಎಸ್. ಚಿಕ್ಕಮಾದು, ಶಾಸಕ