ಮಕ್ಕಳಿಗೆ ವಿಶೇಷ ಕಾಳಜಿ!
ಮೈಸೂರು: ಪ್ರತಿಭಾವಂತ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಡಿ ಬರುವ ವಿವಿಧ ಮಾದರಿ ವಸತಿ ಶಾಲೆಗಳ 6ನೇ ತರಗತಿಗೆ ಪ್ರವೇಶಾತಿ ಮುಕ್ತಾಯಗೊಂಡಿದ್ದು, ಒಟ್ಟು ವಿದ್ಯಾರ್ಥಿಗಳಲ್ಲಿ 32 ಮಂದಿ ವಿಶೇಷ ವರ್ಗಕ್ಕೆ ಸೇರಿದವರು ದಾಖಲಾಗಿದ್ದಾರೆ.
ಈ 32 ವಿದ್ಯಾರ್ಥಿಗಳಲ್ಲಿ ಅಂಗವಿಕಲರು, ವಿಧವೆಯರ ಮಕ್ಕಳು, ತಂದೆ- ತಾಯಿ ಇಲ್ಲದ ಅನಾಥ ಮಕ್ಕಳು ಹಾಗೂ ಬಾಲ ಕಾರ್ಮಿಕರು ಇದ್ದಾರೆ. ಜಿಲ್ಲೆಯಲ್ಲಿರುವ 16 ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು ಹಾಗೂ 6 ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಆಂಗ್ಲ ಮಾಧ್ಯಮ ವಸತಿ ಶಾಲೆಗಳ ಪ್ರವೇಶಾತಿಗೆ ಮಾ.23ರಂದು ಸಿಇಟಿ ನಡೆಸಲಾಗಿತ್ತು. ಅದರಂತೆ 3500 ಮಕ್ಕಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 1100 ಮಕ್ಕಳನ್ನು ಪ್ರವೇಶಾತಿ ಪಡೆಯಲು ಅರ್ಹಗೊಳಿಸಲಾಗಿತ್ತು. ಪರೀಕ್ಷೆ ಬರೆದಿದ್ದ 102 ವಿಶೇಷ ಮಕ್ಕಳಲ್ಲಿ 32 ಮಕ್ಕಳಿಗೆ ಪ್ರವೇಶಾವಕಾಶ ನೀಡಲಾಗಿದೆ. ಆಯ್ಕೆಪಟ್ಟಿಯಲ್ಲಿ ಹೆಸರಿಸಿರುವ ಒಟ್ಟು 1100 ಮಕ್ಕಳಲ್ಲಿ ಸೋಮವಾರ ಮಧ್ಯಾಹ್ನದವರೆಗೆ 884 ಮಕ್ಕಳು ದಾಖಲಾದರು. ಅವರಲ್ಲಿ ಪ್ರವರ್ಗ-1ರ 34, 2ಎ ವರ್ಗದ 114, 2ಬಿ ವರ್ಗದ 11, 3ಎ ವರ್ಗದ 40, 3ಬಿ ವರ್ಗದ 47, ಸಾಮಾನ್ಯ ವರ್ಗದ 10, ಪರಿಶಿಷ್ಟ ಜಾತಿಯ 436, ಪರಿಶಿಷ್ಟ ವರ್ಗದ 160 ಮಕ್ಕಳು ಇದ್ದಾರೆ. ಉಳಿದಂತೆ ಮಾಜಿ ಸೈನಿಕರ ಮಕ್ಕಳು, ಮುಸ್ಲಿಂ, ಕ್ರೈಸ್ತ, ಬೌದ್ಧ ಹಾಗೂ ಸಿಖ್ ಧರ್ಮದವರಿಗೆ ಸೀಟು ನೀಡಲಾಗಿದೆ.
ಮೈಸೂರು ಜಿಲ್ಲೆಯಲ್ಲಿ ಒಟ್ಟು 22 ವಸತಿ ಶಾಲೆಗಳ ಪೈಕಿ 16 ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚೆನ್ಮಮ್ಮ ವಸತಿ ಶಾಲೆಗಳು ಹಾಗೂ 6 ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಆಂಗ್ಲ ಮಾಧ್ಯಮ ವಸತಿ ಶಾಲೆಗಳಿವೆ. ಇವುಗಳಲ್ಲಿ 12 ಪರಿಶಿಷ್ಟ ಜಾತಿಗೆ, 5 ಪರಿಶಿಷ್ಟ ವರ್ಗಕ್ಕೆ, 3 ಹಿಂದುಳಿದ ವರ್ಗಕ್ಕೆ, 2 ಅಲ್ಪಸಂಖ್ಯಾತ ವರ್ಗಕ್ಕೆ ಹಾಗೂ 1 ಸಾಮಾನ್ಯ ವರ್ಗಕ್ಕೆ ಸೇರಿದವಾಗಿವೆ. ಅಂದರೆ ಈ ಮೇಲ್ಕಂಡ ವರ್ಗಕ್ಕೆ ಸೇರಿದ ಶಾಲೆಗಳಲ್ಲಿ ಅದೇ ವರ್ಗಕ್ಕೆ ಶೇ.75ರಷ್ಟು ಮಕ್ಕಳು ಹಾಗೂ ಉಳಿದ ವರ್ಗದ ಶೇ. 25 ಮಕ್ಕಳಿಗೆ ಸೀಟು ಕಾಯ್ದಿರಿಸಲಾಗಿದೆ.
ಧ್ರುವನಾರಾಯಣ ಹೋರಾಟದ ಫಲ
ಚಾಮರಾಜನಗರ ಕ್ಷೇತ್ರದ ಸಂಸದರಾದ ಆರ್. ಧ್ರುವನಾರಾಯಣ ಅವರು ಕೇಂದ್ರದಲ್ಲಿ ಹೋರಾಡಿ ತಮ್ಮ ಕ್ಷೇತ್ರಕ್ಕೆ ಎರಡು ಏಕಲವ್ಯ ವಸತಿ ಶಾಲೆಗಳನ್ನು ಮಂಜೂರು ಮಾಡಿಸಿಕೊಂಡು ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಆಶ್ಚರ್ಯವೆಂದರೆ ರಾಜ್ಯಕ್ಕೆ ಮಂಜೂರಾದ 8 ಶಾಲೆಗಳಲ್ಲಿ ಅವರ ಕ್ಷೇತ್ರಕ್ಕೆ ಎರಡನ್ನೂ ತಂದಿದ್ದಾರೆ. ಎಚ್.ಡಿ. ಕೋಟೆ ಸೊಳ್ಳೇಪುರ ಹಾಗೂ ಕೊಳ್ಳೇಗಾಲ ತಾಲೂಕಿನ ಕೆಂಪನಹಳ್ಳಿಯಲ್ಲಿ ಏಕಲವ್ಯ ಶಾಲೆ ಆರಂಭಿಸಿದ್ದು, 2014-15ನೇ ಸಾಲಿನಿಂದ ಆರಂಭವಾಗಲಿದೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಪಠ್ಯಕ್ರಮ ಆಧಾರಿತ ಶಿಕ್ಷಣ ನೀಡುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯನ್ನು ತಮ್ಮ ವರುಣ ಕ್ಷೇತ್ರದ ತಗಡೂರು ಬಳಿಯ ಚಿನ್ನಂಬಳ್ಳಿಗೆ ಮಂಜೂರು ಮಾಡಿಸಿದ್ದಾರೆ. ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ.
ವಸತಿ ಶಾಲೆಗಳ ಸ್ಥಿತಿ ಉತ್ತಮ
ಮೈಸೂರು ಜಿಲ್ಲೆಯಲ್ಲಿರುವ ಒಟ್ಟು 22 ಶಾಲೆಗಳೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಮೈಸೂರು ತಾಲೂಕಿನ ವರಕೋಡು ಗ್ರಾಮದ ಶಾಲೆ, ಎಚ್.ಡಿ. ಕೋಟೆಯ ಕೆ. ಬೆಳತ್ತೂರು ಶಾಲೆ ಹಾಗೂ ನಂಜನಗೂಡಿನ ಮಹಿಳಾ ವಿದ್ಯಾಪೀಠದ ಶಾಲೆಗಳನ್ನು ಹೊರತುಪಡಿಸಿದರೆ ಮಿಕ್ಕ ಶಾಲೆಗಳೂ ಸ್ವಂತ ಕಟ್ಟಡದಲ್ಲಿ ನಡೆಯುತ್ತಿವೆ. ಎಲ್ಲಾ ಶಾಲೆಗಳಲ್ಲಿ 6ರಿಂದ 12ನೇ ತರಗತಿವರೆಗೆ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಪ್ರತಿ ಶಾಲೆಯಲ್ಲಿಯೂ 250 ಮಕ್ಕಳು ದಾಖಲಾಗಿದ್ದಾರೆ. ಪ್ರತಿ ವರ್ಷ 6ನೇ ತರಗತಿಗೆ ಪ್ರತಿ ಶಾಲೆಗೂ 50 ಮಕ್ಕಳನ್ನು ಸಿಇಟಿ ನಡೆಸಿ ಪ್ರವೇಶಾತಿ ಮಾಡಿಕೊಳ್ಳಲಾಗುತ್ತದೆ. ಅದರಲ್ಲೂ ಕೆ. ಬೆಳತ್ತೂರಿನಲ್ಲಿ ಮೊರಾಜಿ ದೇಸಾಯಿ ಕನ್ನಡ ಮಾಧ್ಯಮ ಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರತಿ ವರ್ಷ ಶೇ.100 ಫಲಿತಾಂಶ ಬಂದಿದೆ.
-ಜೆ. ಮಹದೇವ