ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕುಲಪತಿಯಾಗಿ ಸರ್ವಮಂಗಳ ಅಧಿಕಾರ ಸ್ವೀಕಾರ

Vishwanath S
Updated On : 7 May 2014, 12:13 pm

ಕ.ಪ್ರ.ವಾರ್ತೆ ,  ಮೈಸೂರು ,  ಮೇ 6
ಮೈಸೂರಿನಲ್ಲಿರುವ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಡಾ.ಸರ್ವಮಂಗಳಾ ಶಂಕರ್ ಅವರು ಮಂಗಳವಾರ ಕುಲಸಚಿವ ವೈ.ಎಸ್. ಸಿದ್ದೇಗೌಡರಿಂದ ಅಧಿಕಾರ ಸ್ವೀಕರಿಸಿದರು.
ನಂತರ ಮಾತನಾಡಿದ ಅವರು, ಸಂಗೀತ ಕ್ಷೇತ್ರದಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ನೂರಾರು ವಿದ್ಯಾರ್ಥಿಗಳಿಗೆ ಬೋಧಿಸಿದ್ದೇನೆ. ಈಗ ಕುಲಪತಿ ಹುದ್ದೆ ಅಲಂಕರಿಸಿರುವುದು ಖುಷಿಯಾಗಿದೆ. ಹಾಗೆ ಜವಾಬ್ದಾರಿಯೂ ಹೆಚ್ಚಿದೆ. ಈ ವಿವಿ ಸಾಕಷ್ಟು ವಿವಾದಕ್ಕೆ ಗುರಿಯಾಗಿರುವುದು ನನ್ನ ಗಮನದಲ್ಲಿದೆ. ಇನ್ನೆರಡು ತಿಂಗಳಲ್ಲಿ ಇಲ್ಲಿನ ಆಡಳಿತದ ಬಗ್ಗೆ ಅಧ್ಯಯನ ಮಾಡಿ ಉತ್ತಮ ನಿರ್ಧಾರ ಕೈಗೊಳ್ಳುತ್ತೇನೆ. ದಕ್ಷಿಣ ಭಾರತದಲ್ಲಿಯೇ ಪ್ರಥಮ ಸಂಗೀತ ವಿವಿಯಾದ್ದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಯೋಜನೆ ರೂಪಿಸುತ್ತೇನೆ ಎಂದರು.
ಲಲಿತಕಲಾ ಕಾಲೇಜು ನೀಡಿ: ನಾನು ಗಮನಿಸಿದ ಪ್ರಕಾರ ನಮ್ಮ ವಿವಿಯಲ್ಲಿ ಬೋಧಕರ ಕೊರತೆ ಇದೆ. ಸ್ವಂತ ಕಟ್ಟಡ ಇಲ್ಲದಿರುವುದರಿಂದ ಸರ್ಕಾರದ ಗಮನಕ್ಕೆ ತರಲಾಗುವುದು. ಮೈಸೂರು ವಿವಿ ನಿರ್ವಹಿಸುತ್ತಿರುವ ಲಲಿತಕಲಾ ಕಾಲೇಜನ್ನು ನಮ್ಮ ವಿವಿಗೆ ನೀಡಬೇಕು. ಆ ಕಾಲೇಜು ಉದ್ದೇಶ ಸಂಗೀತ ಮತ್ತು ಪ್ರದರ್ಶಕ ಕಲೆಗಳನ್ನು ಕಲಿಸುವುದರಿಂದ ನಮಗೆ ಸಹಾಯವಾಗಲಿದೆ. ಅಲ್ಲದೇ ವಿದ್ಯಾರ್ಥಿಗಳು ಒಂದೇ ಕಡೆ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ವಿವಿಯಲ್ಲಿ ಸಂಗೀತ, ನೃತ್ಯ ಕಲಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಕನಸಿದೆ. ಅದಕ್ಕಾಗಿ ತಂತ್ರಜ್ಞಾನ ಬಳಸಿಕೊಳ್ಳುವುದು, ರೆಕಾರ್ಡಿಂಗ್ ವ್ಯವಸ್ಥೆ ಜಾರಿಗೆ ತರುವುದು, ಧ್ವನಿ ಸಂಸ್ಕರಣೆಗೆ ಪ್ರಯೋಗಾಲಯ ಆರಂಭಿಸುವುದು, ಸಂಗೀತ ಮೂಲ ಬೇರಾದ ಜಾನಪದ ಕಲೆಗೆ ವಿಶೇಷ ಪ್ರಾಶಸ್ತ್ಯ ನೀಡುವುದು ನಮ್ಮ ಉದ್ದೇಶವಾಗಿದೆ. ಸದ್ಯ 183 ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ. ಮುಂದಿನ ವರ್ಷ ಇವರ ಪ್ರಮಾಣವನ್ನು 500ಕ್ಕೆ ಹೆಚ್ಚಿಸಿ ಕನಿಷ್ಠ 2500 ವಿದ್ಯಾರ್ಥಿಗಳು ಇಲ್ಲಿಗೆ ಪ್ರವೇಶ ಪಡೆಯುವಂತಹ ವಾತಾವರಣ ಸೃಷ್ಟಿಸಲಾಗುವುದು ಎಂದು ಮಾಹಿತಿ ನೀಡಿದರು.
ಕುಲಸಚಿವ ಪ್ರೊ.ವೈ.ಎಸ್. ಸಿದ್ದೇಗೌಡ ಮಾತನಾಡಿ, ಸಂಗೀತ ವಿವಿಗೆ ಸ್ವಂತ ಕಟ್ಟಡ ನಿರ್ಮಿಸಲು ಸರ್ಕಾರಕ್ಕೆ ಎರಡು ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಲ್ಲಿ ಸಾತಗಳ್ಳಿ ಬಳಿ 3200 ಚದರ ಅಡಿ ವಿಸ್ತೀರ್ಣರದಲ್ಲಿ ವಿವಿ ಕ್ಯಾಂಪಸ್ ನಿರ್ಮಿಸಿ, ಕುಲಪತಿಗಳ ಕಚೇರಿ, ನಿರಂತರ ತರಗತಿ ನಡೆಸಲು ಕೊಠಡಿ, 18 ವಿಭಾಗಗಳು ನಿರ್ಮಿಸಲು 19.7 ಕೋಟಿ ವೆಚ್ಚದ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಹಾಗೆ ಹುಣಸೂರು ತಾಲೂಕಿನ ಧರ್ಮಾಪುರದಲ್ಲಿ ಲಭ್ಯವಿರುವ 65 ಎಕರೆ ವಿಸ್ತೀರ್ಣದಲ್ಲಿ ನಿರಂತರ ಕಲಿಕಾ ಕೊಠಡಿ ಹಾಗೂ ಗುರುಕುಲ ಪದ್ಧತಿಗೆ ಭವನ ನಿರ್ಮಿಸಲಾಗುವುದು. ಮೈಸೂರು ತಾಲೂಕು ವರಕೋಡು ಬಳಿ ಇರುವ 100 ಎಕರೆ ಆಸ್ತಿಯು ವಿವಾದವಾಗಿದ್ದು ಸದ್ಯದಲ್ಲಿಯೇ ಬಗೆಹರಿಯಲಿದೆ ಎಂದು ಮಾಹಿತಿ ನೀಡಿದರು.
ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ಎಸ್. ಶೇಖರ್ ಇದ್ದರು.
ಸರ್ವಮಂಗಳಾ ಶಂಕರ್ ಅವರ ಬಗ್ಗೆ
ಡಾ.ಸರ್ವಮಂಗಳಾ ಶಂಕರ್ ಅವರು ಶ್ರೀರಂಗಪಟ್ಟಣದ ಸಂಗೀತ ಪ್ರೇಮಿಗಳಾದ ಎಸ್.ಸಿ. ರಾಜಶೇಖರ್ ಮತ್ತು ಪಾರ್ವತಮ್ಮ ಅವರ ಪುತ್ರಿಯಾಗಿ 1954ರ ಮಾರ್ಚ್ 30 ರಂದು ಜನಿಸಿದರು. ಆರಂಭಿಕ ಶಿಕ್ಷಣವನ್ನು ವಿದ್ವಾನ್ ರಂಗಪ್ಪ ಬಳಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದರು. ಮೈಸೂರು ವಿವಿ ಲಲಿತ ಕಲಾ ಕಾಲೇಜಿನಲ್ಲಿ ಬಿಎ ಮುಗಿಸಿ, ಬೆಂಗಳೂರು ವಿವಿಯಲ್ಲಿ ಎಂ.ಎ ಸಂಗೀತ, ಎಂ.ಫಿಲ್, ಪಿಎಚ್.ಡಿ ಪದವಿ ಪಡೆದರು. ನಂತರ ಬಳ್ಳಾರಿ ಎಂ.ಶೇಷಗಿರಿ ಆಚಾರ್, ಬಿ. ಕೃಷ್ಣಪ್ಪ, ಆನೂರು ಎಸ್. ರಾಮಕೃಷ್ಣ, ಆರ್.ಕೆ. ಶ್ರೀಕಂಠನ್, ವಿ. ರಾಮರತ್ನಂ, ಗೌರಿ ಕುಪ್ಪುಸ್ವಾಮಿ, ಬಿ.ಎಸ್. ವಿಜಯರಾಘವನ್, ರಾ.ವಿಶ್ವೇಶ್ವರನ್, ಟಿ. ಪುಟ್ಟಸ್ವಾಮಯ್ಯ ಬಳಿ ಶಿಷ್ಯತ್ವ ಪಡೆದರು. ಆಕಾಶವಾಣಿಯ ಬಿ.ಹೈ ಶ್ರೇಣಿಯ ಕಲಾವಿದರಾಗಿರುವ ಇವರು 1982 ರಿಂದ ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಕಾರ್ಯಕ್ರಮ ನೀಡುತ್ತ ಬಂದಿದ್ದಾರೆ. ಬಸವ ಬಲ್ಲಿದ ಭಕ್ತಿ, ಮುದ್ದುಕೃಷ್ಣ, ವೈರಾಗ್ಯನಿಧಿ, ಅಕ್ಕ ಮಹಾದೇವಿ, ವಿಶ್ವಧರ್ಮಿ ಬಸವಣ್ಣ, ಸಂಗೀತ ಕ್ಷೇತ್ರಕ್ಕೆ ಬಸವಣ್ಣನವರ ಕೊಡುಗೆ, ಧೀಮಂತ ಮಹಿಳೆ ಅಕ್ಕಮಹಾದೇವಿ, ರಂಜನಿ ಮುಂತಾದ ಸಂಗೀತ ರೂಪಗಳನ್ನು ರಚಿಸಿ, ವಿಮರ್ಶಿಸಿ ಆಕಾಶವಾಣಿಯಲ್ಲಿ ಪ್ರಸ್ತುತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement